ಗೋರಖ್‌ಪುರ ದುರಂತ: ಸರಕಾರ-ಹೆತ್ತವರ ಹೇಳಿಕೆಯಲ್ಲಿ ವಿರೋಧಾಬಾಸ

Update: 2017-08-13 16:14 GMT

ಲಕ್ನೊ, ಆ. 13: ಬಾಬಾ ರಾಘವ ದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆಗಸ್ಟ್ 10ರಂದು ಒಂದು ಬಾರಿ ಮಾತ್ರ ಆಮ್ಲಜನಕದ ಕೊರತೆ ಉಂಟಾಗಿತ್ತು. ಮರುದಿನ ಅದನ್ನು ಸರಿಪಡಿಸಲಾಗಿತ್ತು ಎಂದು ಸರಕಾರ ಪ್ರತಿಪಾದಿಸಿದೆ. ಆದರೆ, ಇದಕ್ಕೆ ತದ್ವಿರುದ್ಧವಾದ ಎರಡು ದಿನಗಳ ಹಿಂದೆಯೇ ಆಮ್ಲಜನಕದ ಮಟ್ಟ ಕಡಿಮೆಯಾಗಿತ್ತು ಎಂದು ಮೃತ  ನವಜಾತ ಶಿಶು ಸಾರಿಕಾ ಶುಕ್ಲಾಳ ತಂದೆ ಅಜಯ್ ಶುಕ್ಲಾ ಹೇಳಿದ್ದಾರೆ.

 ಆಗಸ್ಟ್ 10ರಂದು ಬಿಆರ್‌ಡಿ ವೈದ್ಯಕೀಯ ಕಾಲೇಜಿನ ಮಕ್ಕಳ ವಾರ್ಡ್‌ನಲ್ಲಿ ಆಮ್ಲಜನಕ ಕೊರತೆ ಉಂಟಾದ ಎರಡು ಗಂಟೆಗಳ ಮುನ್ನ ಸಾರಿಕಾ ಶುಕ್ಲಾ ಮೃತಪಟ್ಟಿದ್ದಳು ಎಂದು ಅಜಯ್ ಶುಕ್ಲಾ ಹೇಳಿದ್ದಾರೆ.

 ಹೃದಯ, ಉಸಿರಾಟದ ತೊಂದರೆಯಿಂದ ಶಿಶು ಮೃತಪಟ್ಟಿದೆ ಎಂದು ಆಸ್ಪತ್ರೆ ತಿಳಿಸಿತ್ತು. ಹೃದಯಾಘಾತದಿಂದ ಶ್ವಾಸಕೋಶದ ತೊಂದರೆ ಉಂಟಾಯಿತು ಎಂಬುದು ಇದರ ಅರ್ಥ ಎಂದು ಅವರು ಹೇಳಿದ್ದಾರೆ.

ಆದರೆ, ಆಗಸ್ಟ್ 8ರಂದು ಕೂಡ ಮಕ್ಕಳ ವಾರ್ಡ್‌ನಲ್ಲಿ ಆಮ್ಲಜನಕದ ಮಟ್ಟ ಕಡಿಮೆ ಇತ್ತು. ಇದನ್ನು ಆಮ್ಲಜನಕದ ಮಟ್ಟ ಅಳೆಯುವ ಮಾನಿಟರ್ ಕೆಂಪು ದೀಪ ಹಾಗೂ ಶಬ್ದದ ಮೂಲಕ ಸೂಚಿಸಿತ್ತು ಎಂದು ಶಿಶುವಿನ ಸಂಬಂಧಿಕ ಅಭಿನೀತ್ ಕುಮಾರ್ ಶುಕ್ಲಾ ತಿಳಿಸಿದ್ದಾರೆ.

ಆಗಸ್ಟ್ 10ರಂದು ಕೂಡ ಆಮ್ಲಜನಕದ ಪ್ರಮಾಣ ಕಡಿಮೆ ಇತ್ತು. ಇದರಿಂದ ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಇಷ್ಟೆಲ್ಲ ಮಕ್ಕಳು ಮೃತಪಟ್ಟಿರುವುದು ಆಶ್ಚರ್ಯ ಉಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News