ದುಬೈ ಬಿಸಿಎಫ್ ನಿಂದ ವಿದ್ಯಾರ್ಥಿ ವೇತನ, ಸವಲತ್ತು ವಿತರಣೆ

Update: 2017-08-13 15:26 GMT

ಮಂಗಳೂರು, ಆ. 13: ಬ್ಯಾರೀಸ್ ಕಲ್ಚರಲ್ ಫೋರಂ (ಬಿಸಿಎಫ್) ಯುಎಇ ಮತ್ತು ಬ್ಯಾರೀಸ್ ಕಲ್ಚರಲ್ ಫೋರಂ ಟ್ರಸ್ಟ್ ಮಂಗಳೂರು ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ 547 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, 52 ಮಂದಿ ಮಹಿಳೆಯರಿಗೆ ಹೊಲಿಗೆ ಯಂತ್ರ ಹಾಗೂ 21 ಮಂದಿಗೆ ಗಾಲಿ ಕುರ್ಚಿಗಳ ವಿತರಣಾ ಕಾರ್ಯಕ್ರಮವು ನಗರದ ಲೊಯೋಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ ಅವರು, ವಿದೇಶಗಳಲ್ಲಿ ದುಡಿಯುತ್ತಿರುವ ಬಿಸಿಎಫ್‌ನ ಸದಸ್ಯರು ತಮ್ಮ ಬೆವರಿನ ಫಲದ ಒಂದಂಶವನ್ನು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮೀಸಲಿಟ್ಟಿರುವುದು ಶ್ಲಾಘನೀಯ ಕಾರ್ಯ. ಇಂತಹ ಸಹಾಯವನ್ನು ಪಡೆದಿರುವ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಂಡು ಇತರ ಬಡವರಿಗೂ ಸಹಾಯ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.

ದೇಶದ ಭವಿಷ್ಯವು ಯುವಕರ ಮೇಲಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸದೆ ರೂಪಿಸಲಾಗುವ ಯಾವುದೇ ಚಿಂತನೆಗಳು, ಯೋಜನೆಗಳಿಂದ ದೇಶದ ಭವಿಷ್ಯ ಉಜ್ವಲವಾಗದು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವವನ್ನು ಬೆಳಿಸಿಕೊಂಡು ಮೌಲ್ಯ, ಮಾಹಿತಿ ಮತ್ತು ಸ್ಪಷ್ಟ ಗುರಿಯೊಂದಿಗೆ ಮುನ್ನಡೆಯುತ್ತಾ ಯಶಸ್ಸು ಸಾಧಿಸಬೇಕೆಂದು ಶುಭ ಹಾರೈಸಿದರು.

ಎನ್‌ಎಂಸಿ ಗ್ರೂಪ್‌ನ ಅಧ್ಯಕ್ಷ ಡಾ.ಬಿ.ಆರ್.ಶೆಟ್ಟಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಬಡವರ ಕಾಳಜಿಯೊಂದಿಗೆ ಬಿಸಿಎಫ್ ನಿರ್ವಹಿಸುತ್ತಿರುವ ಕಾರ್ಯ ಶ್ಲಾಘನೀಯ. ಆರ್ಥಿಕವಾಗಿ ಹಿಂದುಳಿದ ಜೋಡಿಗಳಿಗೆ ಮದುವೆ, ಬಡ ಕುಟುಂಬಕ್ಕೆ ಶೌಚಾಲಯದ ನಿರ್ಮಾಣ ಸಹಿತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸುವ ಮೂಲಕ ಸಂಸ್ಥೆಯು ಸಾಮಾಜಿಕ ಕಳಕಳಿಯನ್ನು ಹೊಂದಿದೆ ಎಂದರು.

ಸಚಿವ ಯು.ಟಿ.ಖಾದರ್ ಮಾತನಾಡಿ, ಉತ್ತಮ ಅಂಕಗಳನ್ನು ಗಳಿಸಿದ ಉಭಯ ಜಿಲ್ಲೆಗಳ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿದ್ಯಾರ್ಥಿವೇತನವನ್ನು ವಿತರಿಸುವ ಮೂಲಕ ಬಿಸಿಎಫ್ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಸಂಸ್ಥೆಯ ಸಾಮಾಜಿಕ ಕಳಕಳಿಯನ್ನು ತೋರಿಸಿದೆ. ಇಂದು ಬಿಸಿಎಫ್‌ನಿಂದ ಸಹಾಯವನ್ನು ಪಡೆದಿರುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಕಡೆಗೆ ಗಮನಹರಿಸಬೇಕು. ಈ ಮೂಲಕ ನೆಮ್ಮದಿಯ ಬದುಕು ಕಳೆಯುವಂತಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಅವರು, ಕಳೆದ 16 ವರ್ಷಗಳಿಂದ ಬಿಸಿಎಫ್ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುತ್ತಿದೆ. ವಿದ್ಯಾರ್ಥಿ ವೇತನವು ಕೇವಲ ಹೆಚ್ಚು ಅಂಕಗಳಿಗೆ ಮಾತ್ರ ಸೀಮಿತವಾಗದೆ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಕೂಡ ಗುರುತಿಸಿ ಅವರು ಶಿಕ್ಷಣವನ್ನು ಮುಂದುವರಿಸಿಕೊಂಡು ಹೋಗಲು ವಿದ್ಯಾರ್ಥಿವೇತನವನ್ನು ವಿತರಿಸಲಾಗಿದೆ ಎಂದರು.

ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ.ಮೊಹಿದಿನ್, ಶಾಸಕರಾದ ಮೊಯ್ದಿನ್ ಬಾವ, ಕರ್ನಾಟಕ ಎನ್.ಆರ್.ಐ. ಫೋರಂನ ಉಪಾಧ್ಯಕ್ಷೆ ಆರತಿ ಕೃಷ್ಣ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ, ಎಕ್ಸ್‌ಪರ್ಟೈಸ್ ಗ್ರೂಪ್‌ನ ಅಧ್ಯಕ್ಷ ಕೆ.ಎಸ್.ಸೈಯದ್ ಕರ್ನಿರೆ, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಮುಹಮ್ಮದ್ ಹನೀಫ್, ಸೆನೆಟ್ ಸದಸ್ಯ ಡಾ.ಯು.ಟಿ.ಇಫ್ತಿಕಾರ್, ಜೆಡಿಎಸ್ ರಾಜ್ಯ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹ್ಮದ್, ಅಡ್ವಕೇಟ್ ಬಿ.ಎಂ.ಬಶೀರ್ ಅಹ್ಮದ್, ಜೆಡಿಎಸ್ ಉಡುಪಿ ಜಿಲ್ಲಾ ಉಪಾಧ್ಯಕ್ಷ ಎಂ.ಎಚ್.ಬಿ.ಮುಹಮ್ಮದ್, ಮಂಗಳೂರಿನ ಎನ್‌ಆರ್‌ಐ ಬ್ರಾಂಚ್ ಮ್ಯಾನೇಜರ್ ರಹ್ಮತ್ ಅಲಿ, ಕಂಪಾಸ್ ಓಶಿಯನ್ ಲೊಜಿಸ್ಟಿಕ್ ಯುಎಇ ಇದರ ಸಿಇಒ ಅಬ್ದುಲ್ ಸಮೀರ್ ಮುಹಮ್ಮದ್, ಡಿಕೆಎಸ್‌ಸಿ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಹಾಜಿ ಕಿನ್ಯ, ರಫೀಕ್ ಸೂರಿಂಜೆ, ಹೈದರ್ ಪರ್ತಿಪಾಡಿ, ಅಬೂಬಕರ್ ಆರ್ಲಪದವು, ಅಸ್ಗರ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು.

ಬಿಸಿಎಫ್ ಉಪಾಧ್ಯಕ್ಷ ಹಾಗೂ ಸ್ಕಾಲರ್‌ಶಿಪ್ ಸಮಿತಿಯ ಅಧ್ಯಕ್ಷ ಎಂ.ಇ.ಮೂಳೂರು ಅವರು ಕಳೆದ 16 ವರ್ಷಗಳಿಂದ ಸಂಸ್ಥೆಯು ಕೈಗೊಂಡ ಸಾಮಾಜಿಕ ಕಾರ್ಯಗಳ ಬಗ್ಗೆ ವಿವರಿಸಿದರು.

ಪಂಪ್‌ವೆಲ್ ತಖ್ವಾ ಮಸೀದಿಯ ಮೌಲಾನ ಇಬ್ರಾಹೀಂ ದುಆ ನೆರವೇರಿಸಿದರು. ಬಿಸಿಎಫ್‌ನ ಪೋಷಕ ಮುಮ್ತಾಝ್ ಅಲಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮುಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. ಬಿಸಿಎಫ್ ಸ್ಕಾಲರ್‌ಶಿಪ್ ಸಮಿತಿಯ ಉಪಾಧ್ಯಕ್ಷ ಉಸ್ಮಾನ್ ಮೂಳೂರು ವಂದಿಸಿದರು. ಸಲಹೆಗಾರ ರಫೀಕ್ ಮಾಸ್ಟರ್ ಸನ್ಮಾನ ಕಾರ್ಯಕ್ರಮ ನೆರವೇರಿಸಿಕೊಟ್ಟರು.

ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು. 

ಮಾಜಿ ಸಚಿವ ಬಿ.ಎ.ಮೊಹಿದಿನ್ ಅವರಿಗೆ ‘ಜೀವಮಾನ ಸಾಧನಾ ಪ್ರಶಸ್ತಿ’, ಎನ್.ಎಂ.ಸಿ. ಗ್ರೂಪ್‌ನ ಅಧ್ಯಕ್ಷ ಡಾ.ಬಿ.ಆರ್.ಶೆಟ್ಟಿ ಅವರಿಗೆ ‘ಜಾಗತಿಕ ಮಟ್ಟದಲ್ಲಿ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ’ ಬಿಸಿಎಫ್‌ನ ಸ್ಥಾಪಕ ಪೋಷಕ ಡಾ.ತುಂಬೆ ಮೊಹಿದೀನ್ ಅವರಿಗೆ ‘ಜಾಗತಿಕ ವರ್ಷದ ವ್ಯಕ್ತಿ 2017 ಪ್ರಶಸ್ತಿ’, ಬಿಸಿಎಫ್‌ನ ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮುಹಮ್ಮದ್ ಅವರಿಗೆ ‘ಅಂತಾರಾಷ್ಟ್ರೀಯ ಶಿಕ್ಷಣ ಸೇವಾ ಪ್ರಶಸ್ತಿ’, ಬಿಸಿಎಫ್‌ನ ಉಪಾಧ್ಯಕ್ಷ ಅಬ್ದುಲ್ ಲತೀಫ್ ಮುಲ್ಕಿ ಅವರಿಗೆ ‘ಬಿಸಿಎಫ್ ವರ್ಷದ ಬ್ಯಾರಿ 2017 ಪ್ರಶಸ್ತಿ’, ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್‌ನ ಸ್ಥಾಪಕ ಅಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಅವರಿಗೆ ‘ಮಾನವೀಯ ಮತ್ತು ಸಮಾಜಸೇವಾ ರಾಷ್ಟ್ರೀಯ ಪ್ರಶಸ್ತಿ’ ಕಂಪಾಸ್ ಓಶಿಯನ್ ಲೊಜಿಸ್ಟಿಕ್ ಯುಎಇ ಇದರ ಸಿಇಒ ಅಬ್ದುಲ್ ಸಮೀರ್ ಮುಹಮ್ಮದ್ ಅವರಿಗೆ ‘ಉತ್ಕೃಷ್ಟ ಉದ್ಯಮಿ ಪ್ರಶಸ್ತಿ’ ಹಾಗೂ ರಫೀಕ್ ಮಾಸ್ಟರ್ ಅವರ ಪುತ್ರ ಮುಹಮ್ಮದ್ ಸ್ವರೂಪ್ ಅವರಿಗೆ ‘ಅವಾರ್ಡ್ ಆಫ್ ಎಕ್ಸಲೆಂಟ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News