ಅಧಿಕಾರ ವಹಿಸಿಕೊಂಡ ಬಳಿಕ ಆರು ಪ್ರಮುಖ ಶಾಸನಗಳಿಗೆ ರಾಷ್ಟ್ರಪತಿ ಅಂಕಿತ

Update: 2017-08-13 14:48 GMT

ಹೊಸದಿಲ್ಲಿ,ಆ.13: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಧಿಕಾರ ವಹಿಸಿಕೊಂಡ ಮೂರು ವಾರಗಳಲ್ಲಿ ಸಮುದ್ರ ಹಕ್ಕುಗಳು, ಬಂಧನಗಳು ಮತ್ತು ಹಡಗುಗಳ ವಶ ಪ್ರಕರಣಗಳ ವಿಚಾರಣೆಯನ್ನು ವಿವಿಧ ನ್ಯಾಯಾಲಯಗಳಿಗೆ ವಿಸ್ತರಿಸಿರುವ ಕಾನೂನು ಸೇರಿದಂತೆ ಆರು ಪ್ರಮುಖ ಕಾನೂನುಗಳಿಗೆ ಅಂಕಿತ ಹಾಕಿದ್ದಾರೆ. ಈ ಎಲ್ಲ ಕಾನೂನು ಗಳು ಇತ್ತೀಚಿಗೆ ಸಂಸತ್ತಿನಿಂದ ಅಂಗೀಕರಿಸಲ್ಪಟ್ಟಿದ್ದವು.

ನೌಕಾಪಡೆ ಕಚೇರಿ(ಸಮುದ್ರ ಸಂಬಂಧಿ ದಾವೆಗಳ ನ್ಯಾಯಾಂಗ ವ್ಯಾಪ್ತಿ ಮತ್ತು ಇತ್ಯರ್ಥಗಳು) ಕಾಯ್ದೆ,2017 156 ಮತ್ತು 127 ವರ್ಷಗಳಷ್ಟು ಎರಡು ನೌಕಾಪಡೆ ಕಾಯ್ದೆಗಳನ್ನು ರದ್ದುಗೊಳಿಸಿದೆ. ಈ ಸಂಬಂಧ ಮಸೂದೆಯನ್ನು ರಾಜ್ಯಸಭೆಯು ಎ.24ರಂದು ಮತ್ತು ಲೋಕಸಭೆ ಮಾ.10ರಂದು ಅಂಗೀಕರಿಸಿದ್ದವು.

ವಸಾಹತು ಯುಗದ ಈ ಕಾಯ್ದೆಗಳು ಅಸ್ತಿತ್ವಕ್ಕೆ ಬಂದಾಗ ಬಾಂಬೆ, ಕಲಕತ್ತಾ ಮತ್ತು ಮದ್ರಾಸ್ ಇವು ಮಾತ್ರ ದೇಶದಲ್ಲಿಯ ಮೂರು ಪ್ರಮುಖ ಬಂದರುಗಳಾಗಿದ್ದವು. ಹೀಗಾಗಿ ಸಮುದ್ರ ಸಂಬಂಧಿತ ವಿವಾದಗಳನ್ನು ಈ ಮೂರು ನಗರಗಳಲ್ಲಿಯ ಉಚ್ಚ ನ್ಯಾಯಾಲಯಗಳು ಮಾತ್ರ ಇತ್ಯರ್ಥಗೊಳಿಸಬಹುದಾಗಿತ್ತು. ಇದೀಗ ನೂತನ ಶಾಸನಕ್ಕೆ ರಾಷ್ಟ್ರಪತಿಗಳ ಅಂಕಿತ ಬಿದ್ದಿರುವುದರಿಂದ ಇತರ ಉಚ್ಚ ನ್ಯಾಯಾಲಯಗಳೂ ತಮ್ಮ ವ್ಯಾಪ್ತಿಯಲ್ಲಿನ ಇಂತಹ ದಾವೆಗಳನ್ನು ಇತ್ಯರ್ಥಗೊಳಿಸಬಹುದಾಗಿದೆ.

ಮುಕ್ತ ಮತ್ತು ಕಡ್ಡಾಯ ಶಿಕ್ಷಣಕ್ಕೆ ಮಕ್ಕಳ ಹಕ್ಕು(ತಿದ್ದುಪಡಿ) ಮಸೂದೆ 2017, ಅಂಕಿಅಂಶಗಳ ಸಂಗ್ರಹ(ತಿದ್ದುಪಡಿ) ಮಸೂದೆ 2017, ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ(ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಮಸೂದೆ 2017, ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು,ವೈಜ್ಞಾನಿಕ ಶಿಕ್ಷಣ ಮತ್ತು ಸಂಶೋಧನೆ(ತಿದ್ದುಪಡಿ) ಮಸೂದೆ 2017 ಮತ್ತು ಪಾದರಕ್ಷೆ ವಿನ್ಯಾಸ ಮತ್ತು ಅಭಿವೃದ್ಧಿ ಸಂಸ್ಥೆ ಮಸೂದೆ 2017 ಇವೂ ರಾಷ್ಟ್ರಪತಿಗಳ ಅಂಕಿತವನ್ನು ಪಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News