ಗೋರಖ್‌ಪುರ ಆಸ್ಪತ್ರೆ ದುರಂತ: 79ಕ್ಕೇರಿದ ಸಾವಿನ ಸಂಖ್ಯೆ

Update: 2017-08-13 15:05 GMT

ಹೊಸದಿಲ್ಲಿ, ಆ. 13: ಉತ್ತರಪ್ರದೇಶದ ಗೋರಖ್‌ಪುರದ ಬಾಬಾ ರಾಘವ ದಾಸ್ ವೈದ್ಯಕೀಯ ಕಾಲೇಜಿನಲ್ಲಿ ಆಮ್ಲಜನಕ ಕೊರತೆಯಿಂದ ಮತ್ತೆ 16 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ಮೃತಪಟ್ಟವರ ಸಂಖ್ಯೆ 79ಕ್ಕೆ ಏರಿದೆ. ಇಂದು ಮೃತಪಟ್ಟ 16 ಮಂದಿಯಲ್ಲಿ 11 ಮಕ್ಕಳೂ ಸೇರಿದ್ದಾರೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಗೋರಖ್‌ಪುರ ಬಿಆರ್‌ಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

   ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಸಿದ್ದಾರ್ಥನಾಥ್ ಸಿಂಗ್ ದುರಂತಕ್ಕೆ ಆಮ್ಲಜನಕದ ಕೊರತೆ ಕಾರಣ ಎಂಬುದನ್ನು ನಿರಾಕರಿಸಿದ್ದಾರೆ. ಆಗಸ್ಟ್ 10ರಂದು ಆಮ್ಲಜನಕ ಪೂರೈಕೆ ಮಟ್ಟ ಕಡಿಮೆ ಇತ್ತು. ಆದರೆ, ಕೆಲವೇ ಗಂಟೆಗಳಲ್ಲಿ ಸಮಸ್ಯೆ ಸರಿಪಡಿಸಲಾಯಿತು ಎಂದಿದ್ದಾರೆ.

   ಈ ಹಿಂದೆ ರಾಜ್ಯ ಸರಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದ ಸಿಂಗ್, ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದರು. ಆದರೆ, ಈ ದುರಂತದಲ್ಲಿ ಆಸ್ಪತ್ರೆಯ ನಿರ್ಲಕ್ಷದ ಪಾತ್ರವೂ ಇದೆ ಎಂಬ ಮಾದ್ಯಮಗಳ ವರದಿ ನಿರಾಕರಿಸಿದ್ದರು.

ತನ್ನ ನಿಲುವನ್ನು ಬದಲಿಸದೇ ಇರುವ ಉತ್ತರಪ್ರದೇಶ ಸರಕಾರ 79 ಮಂದಿಯ ಸಾವಿಗೆ ಮೆದುಳು ಜ್ವರವೇ ಕಾರಣ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News