ಮಂಗಳೂರು : ಅಂಗಡಿಯಿಂದ 9.25 ಲಕ್ಷ ರೂ. ಕದ್ದು ಪರಾರಿಯಾಗಿದ್ದ ಕಳ್ಳನ ಬಂಧನ
ಮಂಗಳೂರು, ಆ. 13: ನಗರದ ಬೀಬಿ ಅಲಾಬಿ ರಸ್ತೆಯ ಸೆಲ್ಫ್, ರ್ಯಾಕ್ಸ್ ತಯಾರಿಸುವ ಅಂಗಡಿಯಿಂದ 9.25 ಲಕ್ಷ ರೂ. ನಗದುಯೊಂದಿಗೆ ಪರಾರಿಯಾಗಿದ್ದ ಕಾರ್ಮಿಕನನ್ನು ಬಂದರು ಪೊಲೀಸರು ಗೋವಾದಲ್ಲಿ ಬಂಧಿಸಿದ್ದಾರೆ. ಬಂಧಿತನನ್ನು ಅಸ್ಸಾಂ ಮೂಲದ ಜಸೀಮುದ್ದೀನ್ ಯಾನೆ ಜಸ್ಮುದ್ದೀನ್ (41) ಎಂದು ಗುರುತಿಸಲಾಗಿದೆ. ಈತ ಇಸ್ಮಾಯೀಲ್ ಎಂಬವರಿಗೆ ಸೇರಿದ ಸೆಲ್ಫ್ ರ್ಯಾಕ್ ತಯಾರಿಸುವ ಅಂಗಡಿಯಲ್ಲಿ ಮೂರು ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ. ಗುರುವಾರ ಇಸ್ಮಾಯೀಲ್ ಅವರು ವ್ಯವಹಾರದ 9.25ಲಕ್ಷ ರೂ. ಹಣವನ್ನು ಪ್ಲಾಸ್ಟಿಕ್ ತೊಟ್ಟೆಯೊಂದರಲ್ಲಿ ಕಟ್ಟಿ ಅಂಗಡಿಯಲ್ಲಿಟ್ಟು ಹೋಗಿದ್ದರು. ಆರೋಪಿ ಮಧ್ಯಾಹ್ನ 12.30ರಿಂದ 1.00ಗಂಟೆ ಅವಧಿಯಲ್ಲಿ ಯಾರಿಗೂ ಗೊತ್ತಾಗದಂತೆ ಕಳವು ಮಾಡಿಕೊಂಡು ಹೋಗಿದ್ದಾನೆ. ಅಂಗಡಿ ಮಾಲಕರು ಮರಳಿ ಬಂದು ನೋಡುವಾಗ ಹಣ ಮತ್ತು ಕೆಲಸಕ್ಕಿದ್ದ ಕಾರ್ಮಿಕ ನಾಪತ್ತೆಯಾಗಿದ್ದು, ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಆರಂಭಿಸಿದ ಪೊಲೀಸರು ಗೋವಾದ ಕೊಂಕಣ ರೈಲ್ವೇ ಪೊಲೀಸ್ ಠಾಣೆಯವರ ಸಹಕಾರದಲ್ಲಿ ಆರೋಪಿಯನ್ನು ಬಂಧಿಸಿ, 9 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. 25 ಸಾವಿರ ರೂ. ಆರೋಪಿ ಸ್ವಂತ ಖರ್ಚಿಗೆ ಬಳಕೆ ಮಾಡಿರುವುದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಆದೇಶದಂತೆ ಡಿಸಿಪಿ ಹನುಮಂತರಾಯ, ಎಸಿಪಿ ಉದಯ ನಾಯಕ್ ನಿರ್ದೇಶನದಂತೆ ಕಾರ್ಯಾಚರಣೆಯಲ್ಲಿ ಬಂದರು ಪೊಲೀಸ್ ಇನ್‌ಸ್ಪೆಕ್ಟರ್ ಶಾಂತರಾಮ್, ಎಎಸ್‌ಐ ಪದ್ಮನಾಭ, ಎಎಸ್‌ಐ ಶೋಭಾ, ಹೆಚ್.ಸಿ. ಸುಜನ್ ಶೆಟ್ಟಿ, ಪಿಸಿ ಗೋವರ್ಧನ್ ಭಾಗವಹಿಸಿದ್ದರು.