ಕಾರ್ಮಿಕರಿಗೆ 18,000 ರೂ. ಕನಿಷ್ಠ ವೇತನ ನಿಗದಿಪಡಿಸಿ : ಜಾಗೃತಿ ಜಾಥಾದಲ್ಲಿ ವರಲಕ್ಶ್ಮಿ ಒತ್ತಾಯ

Update: 2017-08-13 16:14 GMT

ಉಡುಪಿ, ಆ.13: 7ನೇ ವೇತನ ಆಯೋಗ ಎರಡು ವರ್ಷಗಳ ಹಿಂದೆ ಮಾಡಿದ ಶಿಫಾರಸ್ಸಿನಂತೆ ಅಸಂಘಟಿತ ಹಾಗೂ ಅಕುಶಲ ಕಾರ್ಮಿಕರಿಗೆ 18,000ರೂ. ಕನಿಷ್ಠ ವೇತನವನ್ನು ನೀಡಬೇಕು ಎಂದು ಸಿಐಟಿಯುನ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ದುಡಿಯುವ ಜನರ ಹಕ್ಕುಗಳ ಸಂರಕ್ಷಣೆಗಾಗಿ ‘ಸಮೃದ್ಧ ಸಮಗ್ರ ಸೌಹಾರ್ದ ಕರ್ನಾಟಕ’ ಎಂಬ ಘೋಷಣೆಯಡಿ ಸಿಐಟಿಯು ಹಮ್ಮಿಕೊಂಡಿರುವ 15 ದಿನಗಳ ಜಾಗೃತಿ ಜಾಥಾ ಇಂದು ಉಡುಪಿ ತಲುಪಿದ್ದು, ಇಲ್ಲಿನ ಬಸ್‌ನಿಲ್ದಾಣದ ಬಳಿಯ ಕ್ಲಾಕ್‌ಟವರ್ ಎದುರು ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

 ದೇಶದಲ್ಲಿ ಹಾಗೂ ರಾಜ್ಯದಲ್ಲಿ ಲಕ್ಷಾಂತರ ಮಂದಿ ಐಸಿಡಿಎಸ್ ನೌಕರರು, ಮಧ್ಯಾಹ್ನದ ಬಿಸಿಯೂಟ, ಆರೋಗ್ಯ ಶಿಕ್ಷಣ ಮೊದಲಾದ ಯೋಜನೆಗಳಲ್ಲಿ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರು ಯಾವುದೇ ಕನಿಷ್ಠ ಕೂಲಿ ಇಲ್ಲದೇ ಕೆಲಸ ಮಾಡುತಿದ್ದಾರೆ. ಈ ಬಗ್ಗೆ ಹಲವು ಬಾರಿ ಕೇಂದ್ರ ಸರಕಾರಕ್ಕೆ ಮನವಿಗಳನ್ನು ಅರ್ಪಿಸಿದರೂ, ಸರಕಾರ ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದವರು ದೂರಿದರು.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಈ ಯೋಜನೆಗಳಿಗೆ ನೀಡುತಿದ್ದ ಅನುದಾನಗಳಲ್ಲಿ ಅರ್ಧದಷ್ಟು ಅಂದರೆ ಸುಮಾರು ಮೂರು ಲಕ್ಷ ಕೋಟಿ ರೂ.ಗಳನ್ನು ಕಡಿತ ಮಾಡಿ, ಅದಾನಿ, ಅಂಬಾನಿಯಂಥವರ 80,000 ಕೋಟಿ ರೂ.ಗಳಿಗೂ ಅಧಿಕ ಬ್ಯಾಂಕ್ ಸಾಲ ಮನ್ನಾ ಮಾಡಿದೆ. ದೇಶದ ರೈತರ ಸಾಲ ಮನ್ನಾ ಮಾಡಲು ನಿರಾಕರಿಸುವ ಈ ಸರಕಾರ ಕಾರ್ಪೋರೇಟ್ ವಲಯಕ್ಕೆ ಕೋಟ್ಯಾಂತರ ರೂ.ಗಳ ತೆರಿಗೆ ವಿನಾಯಿತಿ ನೀಡುವುದಲ್ಲದೇ, ಬ್ಯಾಂಕ್ ಸಾಲವನ್ನು ಸದ್ದಿಲ್ಲದೇ ಮನ್ನಾ ಮಾಡುತ್ತಿದೆ ಎಂದು ಆರೋಪಿಸಿದರು.

ನಮ್ಮ ನೆರೆಯ ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ರಾಜ್ಯದಲ್ಲಿ ಯಾವುದೇ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರ ಕನಿಷ್ಠ ದಿನಗೂಲಿ ವೇತನ 600ರೂ. ನೀಡುವ ಕಾನೂನನ್ನು ಜಾರಿಗೊಳಿಸಿದೆ. ಕರ್ನಾಟಕದಲ್ಲೂ ಇದೇ ಕಾನೂನನ್ನು ಜಾರಿಗೊಳಿಸುವಂತೆ ಅವರು ಸಿದ್ಧರಾಮಯ್ಯ ಸರಕಾರವನ್ನು ಒತ್ತಾಯಿಸಿದರು.

ಕಳೆದ ಜು.29ರಂದು ಚಿಕ್ಕಬಳ್ಳಾಪುರದ ವಿಧುರಾಶ್ವಥ್ಥದಿಂದ ಹೊರಟ ಈ ಜಾಗೃತಿ ಜಾಥಾ ರಾಜ್ಯಾದ್ಯಂತ ಸಂಚರಿಸಿದ್ದು, ಇಂದು ಸಂಜೆ ಕುಂದಾಪುರದಲ್ಲಿ ಸಾರ್ವಜನಿಕ ಸಭೆಯೊಂದಿಗೆ ಮುಕ್ತಾಯಗೊಳ್ಳಲಿದೆ. ಕನಿಷ್ಠ ವೇತನ ಜಾರಿ, ಉದ್ಯೋಗ ಭದ್ರತೆ, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದ ವಿರುದ್ಧ ಹಾಗೂ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ನಾಳೆ ಆ.14ರಂದು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸಂಜೆ 6ರಿಂದ ಮಧ್ಯರಾತ್ರಿ 12:00ಗಂಟೆಯವರೆಗೆ ಸ್ವಾತಂತ್ರ ಸತ್ಯಾಗ್ರಹ ಚಳವಳಿ ನಡೆಯಲಿದೆ. ಅಲ್ಲದೇ ಮುಂದಿನ ಸೆ.14ರಂದು ಬೆಂಗಳೂರಿನಲ್ಲಿ ಬೃಹತ್ ಪ್ರದರ್ಶನವೂ ನಡೆಯಲಿದೆ ಎಂದವರು ನುಡಿದರು.

ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್, ಜಿಲ್ಲಾ ನಾಯಕರಾದ ಕೆ.ಶಂಕರ್, ಬಾಲಕೃಷ್ಣ ಶೆಟ್ಟಿ, ವಿಶ್ವನಾಥ್ ರೈ, ಕವಿರಾಜ್, ವಿದ್ಯಾರಾಜ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News