ವಿಶ್ವಕ್ಕೆ ಕಲೆ, ಸಂಸ್ಕೃತಿ ಪರಿಚಯಿಸಿದವರು ವಿಶ್ವಕರ್ಮರು: ಆಸ್ಕರ್
ಹೆಬ್ರಿ, ಆ.13: ವಿಶ್ವಕ್ಕೆ ಭಾರತದ ಕಲೆ ಸಂಸ್ಕೃತಿಯನ್ನು ಪರಿಚಯಿಸಿದವರು ವಿಶ್ವಕರ್ಮರು. ಶಿಲ್ಪಕಲೆ ಇಡೀ ಜಗತ್ತಿಗೆ ಮಾದರಿಯಾಗಿದೆ. ವಿಶ್ವಕರ್ಮರಿಗೆ ಕಲೆ, ಸಂಸ್ಕೃತಿ ಹುಟ್ಟಿನಿಂದಲೇ ಬಂದಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದ್ದಾರೆ.
ಹೊಸದಿಲ್ಲಿಯ ಕರ್ನಾಟಕ ಸಂಘದ ಸಭಾಂಗಣದಲ್ಲಿ ಕಲಾಸಂಕುಲ ಸಂಸ್ಥೆಯ ವತಿಯಿಂದ ಶುಕ್ರವಾರ ನಡೆದ ಅಖಿಲ ಭಾರತ 2ನೇ ವಿಶ್ವಕರ್ಮ ಸಂಸ್ಕೃತಿ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕರ್ನಾಟಕದಲ್ಲಿ ವಿಶ್ವಕರ್ಮ ಸಮುದಾಯ ಅಭಿವೃದ್ಧಿಯಾಗಬೇಕೆಂಬ ಉದ್ದೇಶ ದಿಂದಲೇ ಕರ್ನಾಟಕ ಸರಕಾರ ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದೆ. ಕರಕುಶಲಕರ್ಮಿಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಲಿ ಎಂಬುದು ಇದರ ಆಶಯ ಎಂದವರು ಹೇಳಿದರು.
ಸಮ್ಮೇಳನ ಸಮಿತಿಯ ಅಧ್ಯಕ್ಷ ಕಲಾಸಂಕುಲ ಸಂಸ್ಥೆಯ ಅಧ್ಯಕ್ಷ ಮಾರುತಿ ಬಡಿಗೇರ್ ಮಾತನಾಡಿ, ದಿಲ್ಲಿಯಲ್ಲಿ ವಿಶ್ವಕರ್ಮ ಭವನ ನಿರ್ಮಾಣ, ಕೇಂದ್ರ ಸರಕಾರದಿಂದ ವಿಶ್ವಕರ್ಮ ಜಯಂತಿ ಘೋಷಣೆ ಮತ್ತು ದೇಶದ ಇತರ ರಾಜ್ಯದಲ್ಲೂ ವಿಶ್ವಕರ್ಮ ಜಯಂತಿ ಘೋಷಣೆಯನ್ನು ಕೇಂದ್ರ ಮಾಡಬೇಕೆಂಬ ಉದ್ದೇಶದಿಂದ ಸಮ್ಮೇಳವನ್ನು ನಡೆಸಲಾಗುತ್ತಿದೆ ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಬೆಂಗಳೂರಿನ ಕೆ.ಎಸ್.ಪ್ರಭಾಕರ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ನಂದಕುಮಾರ್, ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಾಬು ಪತ್ತಾರ್, ಹೊಸದಿಲ್ಲಿ ಜನಕಪುರಿ ಕನ್ನಡ ಕೂಟದ ಅಧ್ಯಕ್ಷ ಎನ್.ಆರ್. ಶ್ರೀನಾಥ್, ಕಲಬುರ್ಗಿ ವಿಶ್ವಕರ್ಮ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ವೀರೇಂದ್ರ ಇನಾಂದಾರ್, ದಿಲ್ಲಿಯ ವಿಶ್ವಕರ್ಮ ಸಮಾಜದ ಮುಖಂಡ ಓರಿಲಾಲ್ ಶರ್ಮಾ, ದಿನೇಶ್ ವತ್ಸ, ಪರಮಾನಂದ ಜಾಂಗೀರ, ವೇದಪ್ರಕಾಶ್ ಪಾಂಚಾಳ್, ಪ್ರಕಾಶ್ ಪಾಂಚಾಳ್, ಒಲಿಂಪಿಕ್ ಕ್ರೀಡಾಪಟು ದೀಪಾ ಕರ್ಮಾಕರ್ ಮುಂತಾದವರು ಉಪಸ್ಥಿತರಿದ್ದರು.
ಸಮ್ಮೇಳನದಲ್ಲಿ ಮಂಗಳೂರಿನ ನೃತ್ಯ ಕಲಾವಿದೆ ರೆಮೋನಾ ಇವೆಟ್ ಪಿರೇರಾ ಅವರಿಂದ ನೃತ್ಯ ವೈಭವ, ಉಡುಪಿಯ ಸುರೇಶ್ ಆಚಾರ್ಯ ಮತ್ತು ರಾಯಚೂರಿನ ಸೌಭಾಗ್ಯರಿಂದ ಗೀತಗಾಯನ ನಡೆಯಿತು.
ವಿವಿಧ ಕ್ಷೇತ್ರಗಳ ಗಣ್ಯ ಸಾಧಕರಾದ ದಿನೇಶ್ ಕುಮಾರ್, ವತ್ಸ ವಿಶ್ವಕರ್ಮ ನವದೆಹಲಿ, ಅಜಯ್ ಕುಮಾರ್ ಶೋಭಾನೆ ಭೂಪಾಲ್, ಆರ್ಬೇಟ್ಟು ಜ್ಞಾನದೇವ ಕಾಮತ್, ಹೇಮರೆಡ್ಡಿ ಎನ್, ಆರ್. ಸೌಭಾಗ್ಯ, ಸೋಮಶೇಖರ್, ಜಿ.ಮಹೇಶ್, ಫಾತೀಮಾ ಹುಸೇನ್, ಕೃಷ್ಣ ಕುಮಾರ್ ಎಸ್. ಯಾಧವ್, ವಿಜಯ ಕುಮಾರ್ ಹಂಚಿನಾಳ್, ಮೋನಪ್ಪ ಇನಾಂದಾರ್, ಕಾಳಪ್ಪ ಇನಾಂದಾರ್, ಎಂ.ಜಿ.ಪತ್ತಾರ್ ಇವರಿಗೆ ಪ್ರಶಸ್ತಿ ಪ್ರದಾನ ಹಾಗೂ ರೆಮೋನಾ ಇವೆಟ್ ಪಿರೇರಾಗೆ ಭಾರತ ಗೌರ ಪ್ರಶಸ್ತಿ ಪ್ರದಾನ ಮಾಡಲಾಯಿತು.