ಶ್ರೀರಾಮನ ಜಮೀನು ಮಾರಿದ ದೇವಸ್ಥಾನದ ಅರ್ಚಕ ..!

Update: 2017-08-13 16:52 GMT

ರಾಂಚಿ, ಆ.13: ಶ್ರೀರಾಮ ದೇವಳಕ್ಕೆ ಸೇರಿದ ಜಮೀನನ್ನು ದೇವಸ್ಥಾನದ ಅರ್ಚಕನೇ ಮಾರಾಟ ಮಾಡಿರುವ ಪ್ರಕರಣವೊಂದು ಜಾರ್ಖಂಡ್‌ನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಚಕನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

 ಜಾನಕಿ ತಪೋವನ ಮಂದಿರದ ಅರ್ಚಕ ರಾಮ್‌ಶರಣ್ ದಾಸ್ ಹಾಗೂ ಹಲವು ‘ಅಪರಿಚಿತ ವ್ಯಕ್ತಿ’ಗಳ ವಿರುದ್ಧ ಸಿಬಿಐ ಆರೋಪಪಟ್ಟಿ ದಾಖಲಿಸಿದೆ. ಸರಕಾರಿ ಉದ್ಯೋಗಿಗಳು, ಬಿಲ್ಡರ್‌ಗಳು, ಲ್ಯಾಂಡ್ ಮಾಫಿಯಾದ ವ್ಯಕ್ತಿಗಳು ಈ ಪ್ರಕರಣದಲ್ಲಿ ಒಳಗೊಂಡಿದ್ದು ಇವರ ವಿರುದ್ಧ ದೇವಳದ ಟ್ರಸ್ಟ್‌ಗೆ ಸೇರಿದ 19 ಎಕರೆ ಜಮೀನನ್ನು ಮಾರಾಟ/ವರ್ಗಾವಣೆ ಮಾಡಿರುವ ಆರೋಪ ದಾಖಲಿಸಲಾಗಿದೆ. ನಗರದ ಕೇಂದ್ರ ಭಾಗದಲ್ಲಿ ಈ ಜಮೀನಿದೆ.

  1948ರಲ್ಲಿ (ಈಗ ದಿವಂಗತ )ಜಾನಕಿ ಜೀವನ್‌ಶರಣ್ ಎಂಬವರು ಶ್ರೀರಾಮ್ ಜಾನಕಿ ತಪೋವನ್ ಮಂದಿರ್ ಟ್ರಸ್ಟ್ ಎಂಬುದನ್ನು ಸ್ಥಾಪಿಸಿದ್ದು ದೇವರಾದ ಶ್ರೀರಾಮ ಮತ್ತು ಜಾನಕಿ(ಸೀತೆ)ಯನ್ನು ‘ಶಾಶ್ವತ ಅಪ್ರಾಪ್ತರು’ ಎಂದು ಟ್ರಸ್ಟ್‌ನ ದಾಖಲೆಗಳಲ್ಲಿ ತಿಳಿಸಲಾಗಿದೆ. ದೇವಸ್ಥಾನಕ್ಕೆ ಸೇರಿದ ಆಸ್ತಿಯ ಸಂಪೂರ್ಣ ನಿರ್ವಹಣೆಯ ಹೊಣೆಗಾರಿಕೆಯನ್ನು ಟ್ರಸ್ಟ್ ಹೊಂದಿರುತ್ತದೆ ಎಂದು ತಿಳಿಸಲಾಗಿತ್ತು.

 ಆದರೆ, ದೇವಳದ ಹಾಲಿ ಅರ್ಚಕ ರಾಮ್‌ಶರಣ್ ದಾಸ್ ಒಳಸಂಚು ನಡೆಸಿ 2005ರಲ್ಲಿ ಟ್ರಸ್ಟ್ ದಾಖಲೆಯನ್ನು ಅಕ್ರಮವಾಗಿ ಪರಿಷ್ಕರಿಸಿ ಹೊಸ ಕರಾರುಪತ್ರವನ್ನು ರಚಿಸಿದ್ದರು ಮತ್ತು ಹಳೆಯ ಕರಾರುಪತ್ರವನ್ನು ರದ್ದುಗೊಳಿಸಿದ್ದರು. ಇದರಲ್ಲಿ ಟ್ರಸ್ಟ್‌ನ ಮೂಲ ಸ್ಥಾಪಕ ತಾನೇ ಎಂದು ಆತ ಬರೆಸಿದ್ದ. ಅಲ್ಲದೆ, ಕಟ್ಟಡಗಳನ್ನು ನಿರ್ಮಿಸುವ ಉದ್ದೇಶಕ್ಕೆ ಟ್ರಸ್ಟ್‌ನ ಜಮೀನನ್ನು ಮಾರಾಟ

/ ವರ್ಗಾವಣೆ ಮಾಡಬಹುದು ಎಂಬ ಕರಾರನ್ನೂ ಅಕ್ರಮವಾಗಿ ಸೇರಿಸಿದ್ದ ಎಂದು ಸಿಬಿಐ ಆರೋಪಿಸಿದೆ. ಬಳಿಕ ಅಕ್ರಮ ದಾಖಲೆಗಳನ್ನು ಮುಂದಿರಿಸಿ ಜಾರ್ಖಂಡ್ ರಾಜ್ಯ ಹಿಂದೂ ಧಾರ್ಮಿಕ ಟ್ರಸ್ಟ್ ಮಂಡಳಿಯಿಂದ ಜಮೀನು ಮಾರಾಟ/ವರ್ಗಾವಣೆಗೆ ಅನುಮತಿಯನ್ನೂ ಪಡೆಯಲು ಸಫಲವಾಗಿದ್ದ . ನಂತರ ಹಲವು ಲ್ಯಾಂಡ್ ಮಾಫಿಯಾ, ಬಿಲ್ಡರ್‌ಗಳ ಜೊತೆ ಸೇರಿಕೊಂಡು ದೇವಳದ ಜಮೀನನ್ನು ಮಾರಾಟ ಮಾಡಿದ್ದ ಎಂದು ಸಿಬಿಐ ಸಲ್ಲಿಸಿದ್ದ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಈ ವ್ಯವಹಾರಕ್ಕೆ ಅಗತ್ಯವಿದ್ದ ದಾಖಲೆಗಳನ್ನು ಒದಗಿಸುವಲ್ಲಿ ರಾಂಚಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ(ಆರ್‌ಆರ್‌ಡಿಎ)ದ ಕೆಲವು ಅಧಿಕಾರಿಗಳೂ ನೆರವಾಗಿದ್ದರು ಎಂದು ಸಿಬಿಐ ಆರೋಪಿಸಿದ್ದು, ಕ್ರಿಮಿನಲ್ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News