ಮಹಾರಾಷ್ಟ್ರದ ಸರಕಾರಿ ಆಸ್ಪತ್ರೆಗಳು ಅಪಾಯಕಾರಿ ತ್ಯಾಜ್ಯಗಳ ಸುರಕ್ಷಿತ ವಿಲೇವಾರಿ ಮಾಡುತ್ತಿಲ್ಲ: ಸಿಎಜಿ
ಮುಂಬೈ,ಆ.14: ಮಹಾರಾಷ್ಟ್ರದಲ್ಲಿಯ ಸರಕಾರಿ ಆಸ್ಪತ್ರೆಗಳು ಅಪಾಯಕಾರಿ ವೈದ್ಯಕೀಯ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುತ್ತಿಲ್ಲ ಎಂದು ಇತ್ತೀಚಿಗೆ ಬಿಡುಗಡೆಗೊಂಡ ಮಹಾ ಲೇಖಪಾಲ(ಸಿಎಜಿ)ರ ವರದಿಯು ಹೇಳಿದೆ.
ಆಸ್ಪತ್ರೆಗಳು, ನರ್ಸಿಂಗ್ ಹೋಮ್‌ಗಳು, ರಕ್ತನಿಧಿಗಳು ಮತ್ತು ಪಶು ವೈದ್ಯಕೀಯ ಸಂಸ್ಥೆಗಳ ಜೈವಿಕ-ವೈದ್ಯಕೀಯ ತ್ಯಾಜ್ಯಗಳು ಸಿರಿಂಜ್, ಬ್ಯಾಂಡೇಜ್, ಕತ್ತರಿಸಲ್ಪಟ್ಟ ಅಂಗಾಂಗಗಳು ಮತ್ತು ಪ್ರಾಣಿ ಜೈವಿಕ ತ್ಯಾಜ್ಯ ಇತ್ಯಾದಿಗಳನ್ನು ಒಳಗೊಂಡಿರುತ್ತವೆ. ಭೂಮಿಯೊಳಗೆ ಹುಗಿಯಲು ಸಾಗಿಸಲಾಗುವ ತ್ಯಾಜ್ಯಗಳ ಜೊತೆ ಇವುಗಳನ್ನು ಸೇರಿಸುವಂತಿಲ್ಲ. ಪರಿಸರ ರಕ್ಷಣೆ ಕಾಯ್ದೆ 1986ರ ಜೈವಿಕ-ವೈದ್ಯಕೀಯ ತ್ಯಾಜ್ಯ(ವ್ಯವಸ್ಥಾಪನೆ ಮತ್ತು ನಿರ್ವಹಣೆ) ನಿಯಮಗಳು 1998ರಡಿ ನಿಗದಿತ ಮಾರ್ಗಸೂಚಿಯ ಅನ್ವಯವೇ ಇವುಗಳನ್ನು ವಿಲೇವಾರಿ ಮಾಡಬೇಕಾಗುತ್ತದೆ. ಸುರಕ್ಷಿತವಲ್ಲದ ರೀತಿಯಲ್ಲಿ ವಿಲೇವಾರಿ ಮಾಡಿದರೆ ಇವು ಸೋಂಕು ರೋಗಗಳಿಗೆ ಕಾರಣವಾಗಬಹುದು.
ಮಹಾರಾಷ್ಟ್ರದಲ್ಲಿ ಹಾಸಿಗೆಗಳ ವ್ಯವಸ್ಥೆಯಿರುವ 140 ಮುನ್ಸಿಪಲ್ ಆಸ್ಪತ್ರೆಗಳಿವೆ. ಕೇಂದ್ರ ಪರಿಸರ ಸಚಿವಾಲಯವು ಕಳೆದ ವರ್ಷ ಕಟ್ಟುನಿಟ್ಟಿನ ಜೈವಿಕ-ವೈದ್ಯಕೀಯ ತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಹೊರಡಿಸಿದೆ.
ನಿಯಮಗಳನ್ನು ಸೂಕ್ತವಾಗಿ ಜಾರಿಗೊಳಿಸುವುಲ್ಲಿ ವೈಫಲ್ಯಕ್ಕಾಗಿ ರಾಜ್ಯ ಪರಿಸರ ಇಲಾಖೆ ಮತ್ತು ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಎಂಪಿಸಿಬಿ)ಯನ್ನು ಸಿಎಜಿ ತನ್ನ ವರದಿಯಲ್ಲಿ ತರಾಟೆಗೆತ್ತಿಕೊಂಡಿದೆ.
2010ರಿಂದ 2014ರವರೆಗಿನ ಸಮೀಕ್ಷಾ ಅವಧಿಯಲ್ಲಿ ಭಾರತದ ಆಸ್ಪತ್ರೆಗಳಲ್ಲಿನ ಪ್ರತಿ ಹಾಸಿಗೆಯು ಪ್ರತಿದಿನ 194ರಿಂದ 283 ಗ್ರಾಂ ಜೈವಿಕ-ವೈದ್ಯಕೀಯ ತ್ಯಾಜ್ಯವನ್ನು ಉತ್ಪಾದಿಸಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಹೇಳಿದೆ. ಮಹಾರಾಷ್ಟ್ರದಲ್ಲಿ ಈ ಪ್ರಮಾಣ 185ರಿಂದ 255 ಗ್ರಾಂ ಇದೆ.
ಆಸ್ಪತ್ರೆಗಳಲ್ಲಿ ತ್ಯಾಜ್ಯ ವಿಲೇವಾರಿಯ ಮೇಲೆ ಎಂಪಿಸಿಬಿ ಸಮರ್ಪಕ ನಿಗಾಯಿಟ್ಟಿಲ್ಲ. ಜೈವಿಕ-ವೈದ್ಯಕೀಯ ತ್ಯಾಜ್ಯ ಕುರಿತು ರಾಜ್ಯ ಸರಕಾರ ಮತ್ತು ಎಂಪಿಸಿಬಿಗೆ ಸಲಹೆ ನೀಡಬೇಕಾದ ಸಮಿತಿಯು 2011-16ರ ಅವಧಿಯಲ್ಲಿ ಒಂದು ಬಾರಿಯೂ ಸಭೆ ಸೇರಿಲ್ಲ ಎಂದು ಸಿಎಜಿ ವರದಿಯು ತಿಳಿಸಿದೆ.