ಕಾಶ್ಮೀರ ವಿವಾದದಲ್ಲಿ ಪಾತ್ರ ವಹಿಸಿ: ಅಂತಾರಾಷ್ಟ್ರೀಯ ಸಮುದಾಯಕ್ಕೆ ಪಾಕ್ ಪ್ರಧಾನಿ ಒತ್ತಾಯ

Update: 2017-08-14 14:41 GMT

ಇಸ್ಲಾಮಾಬಾದ್, ಆ. 14: ಭಾರತದೊಂದಿಗೆ ಪಾಕಿಸ್ತಾನ ಹೊಂದಿರುವ ಕಾಶ್ಮೀರ ವಿವಾದವನ್ನು ಬಗೆಹರಿಸುವಲ್ಲಿ ತಕ್ಕ ಪಾತ್ರವನ್ನು ನಿಭಾಯಿಸುವಂತೆ ಪಾಕಿಸ್ತಾನದ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ಸೋಮವಾರ ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದ್ದಾರೆ.

‘‘ವಿಶ್ವಸಂಸ್ಥೆಯ ನಿರ್ಣಯಗಳಿಗೆ ಅನುಗುಣವಾಗಿ ಪ್ರಾದೇಶಿಕ ಸಂಘರ್ಷಗಳ ಇತ್ಯರ್ಥದಲ್ಲಿ ಅಂತಾರಾಷ್ಟ್ರೀಯ ಸಮುದಾಯ ತನ್ನ ಪಾತ್ರವನ್ನು ವಹಿಸಬೇಕಾಗಿರುವುದು ಅಗತ್ಯವಾಗಿದೆ. ಅದರಲ್ಲೂ ಮುಖ್ಯವಾಗಿ ಕಾಶ್ಮೀರ ವಿವಾದದಕ್ಕೆ ಸಂಬಂಧಿಸಿ, ಈ ವಲಯದಲ್ಲಿ ಶಾಶ್ವತ ಶಾಂತಿ ನೆಲೆಸುವಂತೆ ಮಾಡಲು ವಿವಾದದ ಇತ್ಯರ್ಥದಲ್ಲಿ ಅಂತಾರಾಷ್ಟ್ರೀಯ ಸಮುದಾಯ ತನ್ನ ಪಾತ್ರವನ್ನು ವಹಿಸಬೇಕು’’ ಎಂದು ಪಾಕಿಸ್ತಾನದ ಸ್ವಾತಂತ್ರ ದಿನಾಚರಣೆ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅಬ್ಬಾಸಿ ಹೇಳಿದರು.

ಜಗತ್ತಿನ ಎಲ್ಲ ದೇಶಗಳೊಂದಿಗೆ, ಅದರಲ್ಲೂ ಮುಖ್ಯವಾಗಿ ನೆರೆಯ ದೇಶಗಳೊಂದಿಗೆ ಸಾರ್ವಭೌಮ ಸಮಾನತೆಯ ನೆಲೆಯಲ್ಲಿ ಧನಾತ್ಮಕ ಮತ್ತು ರಚನಾತ್ಮಕ ಸಂಬಂಧಗಳನ್ನು ಹೊಂದರಲು ಪಾಕಿಸ್ತಾನ ಬಯಸುತ್ತದೆ ಎಂದರು.

‘‘ದಕ್ಷಿಣ ಏಶ್ಯದ ಜನರು ಕಳೆದ 50 ವರ್ಷಗಳ ಅವಧಿಯಲ್ಲಿ ಸುದೀರ್ಘ ಸಂಘರ್ಷಗಳ ಹಿನ್ನೆಲೆಯಲ್ಲಿ ಭಾರೀ ಸಂಕಷ್ಟಕ್ಕೊಳಗಾಗಿದ್ದಾರೆ. ಈ ಸಂಘರ್ಷಗಳು ಸೌಹಾರ್ದಯುತವಾಗಿ ಪರಿಹಾರಗೊಳ್ಳದಿದ್ದರೆ, ವಲಯದ ಜನರು ಪ್ರಗತಿ ಮತ್ತು ಸಮೃದ್ಧಿಯನ್ನು ಸಾಧಿಸಲು ಸಾಧ್ಯವಿಲ್ಲ’’ ಎಂದು ಪಾಕ್ ಪ್ರಧಾನಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News