ಕಾರ್ಪ್ ಬ್ಯಾಂಕ್‌ನಲ್ಲಿ ಹಾಜಿ ಅಬ್ದುಲ್ಲಾರ 82ನೆ ಪುಣ್ಯ ಸ್ಮರಣೆ
ಉಡುಪಿ, ಆ.14: ಉಡುಪಿಯ ಕೊಡುಗೈ ದಾನಿ ಖಾನ್ ಬಹಾದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಖಾಸಿಂ ಸಾಹೇಬ್ ಬಹಾದ್ದೂರ್ ಅವರ 82ನೆ ಪುಣ್ಯ ಸಂಸ್ಮರಣೆ ಇತ್ತೀಚೆಗೆ ಉಡುಪಿಯ ಅವರ ನಿವಾಸವಾಗಿದ್ದ ಈಗಿನ ಬ್ಯಾಂಕಿನ ಹೆರಿಟೇಜ್ ಮ್ಯೂಸಿಯಂನಲ್ಲಿ ನಡೆಯಿತು.
ಹೆರಿಟೇಜ್ ಮ್ಯೂಸಿಯಂನಲ್ಲಿರುವ ಹಾಜಿ ಅಬ್ದುಲ್ಲಾರ ಪ್ರತಿಮೆಗೆ ವಲಯ ಮುಖ್ಯಸ್ಥ ಹಾಗೂ ಉಪ ಮಹಾಪ್ರಬಂಧಕ ಡಾ.ವಿ.ರಾಜೇಂದ್ರ ಪ್ರಸಾದ್ ಹಾರಾರ್ಪಣೆ ಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ ಉಪ ವಲಯ ಮುಖ್ಯಸ್ಥ ಹಾಗೂ ಸಹಾಯಕ ಮಹಾ ಪ್ರಬಂಧಕ ಲಕ್ಷ್ಮಣ್ ಪ್ರಭು, ಮುಖ್ಯ ಪ್ರಬಂಧಕ ಜಗದೀಶ್ ನಾಯಕ್, ಮ್ಯೂಸಿಯಂ ಸಂರಕ್ಷಕ ಎಂ.ಕೆ. ಕೃಷ್ಣಯ್ಯ ಹಾಗೂ ಬ್ಯಾಂಕಿನ ಇತರ ಉದ್ಯೋಗಿಗಳು ಉಪಸ್ಥಿತರಿದ್ದರು.
ಹಾಜಿ ಅಬ್ದುಲ್ಲಾ ಅವರು 82 ವರ್ಷಗಳ ಹಿಂದೆ 1935ರ ಆ.12ರಂದು ನಿಧನರಾಗಿದ್ದು, ಅಂದು ಅಗಲಿದ ಹಾಜಿ ಅಬ್ದುಲ್ಲಾರಿಗೆ ಶೃದ್ಧಾಂಜಲಿ ಅರ್ಪಿಸಲು ಸಾಗರೋಪಾದಿಯಲ್ಲಿ ಜನಸಾಗರ ನೆರೆದು ಉಡುಪಿಯಲ್ಲಿ ಈವರೆಗೂ ಕಂಡು ಕೇಳರಿಯದಂತಹ ಅಭೂತಪೂರ್ವ ಮೆರವಣಿಗೆಯೊಂದಿಗೆ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗಿತ್ತು. ಸಂಪೂರ್ಣ ಉಡುಪಿ ಪೇಟೆಯಲ್ಲಿ ಶೋಕದ ವಾತಾವರಣವಿದ್ದು, ಜನರು ಸ್ವಯಂ ಪ್ರೇರಣೆಯಿಂದ ಮೂರು ದಿನ ಬಂದ್ ಆಚರಿಸಿದ್ದರು.
ಹಾಜಿ ಅಬ್ದುಲ್ಲಾ ಸಾಹೇಬ್ ಒಬ್ಬ ಅತ್ಯುತ್ತಮ ಸಮಾಜಮುಖಿ ಸೇವಾ ಕಾರ್ಯ ಹಾಗೂ ದಾನಧರ್ಮಗಳಿಂದ ಸುಪ್ರಸಿದ್ಧರಾಗಿದ್ದರು. ಉಡುಪಿಯಲ್ಲಿ ಸ್ವದೇಶಿ ಚಳವಳಿ ನೇತೃತ್ವ ವಹಿಸಿದ್ದರು. 1906ರ ಮಾ.12ರಂದು ಅವರು ಉಡುಪಿಯಲ್ಲಿ ಕಾರ್ಪೊರೇಶನ್ ಬ್ಯಾಂಕನ್ನು ಹುಟ್ಟು ಹಾಕಿ ಅದರ ಸ್ಥಾಪಕ ಅಧ್ಯಕ್ಷರಾಗಿದ್ದರು.