ಆಳ್ವಾಸ್‌ನಲ್ಲಿ ಸಮಾಜ ವಿಜ್ಞಾನದ ಕುರಿತು ಉಪನ್ಯಾಸ
ಮೂಡಬಿದಿರೆ, ಆ. 14: ಆಳ್ವಾಸ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ 20ನೆ ಶತಮಾನದ ಸಮಾಜ ವಿಜ್ಞಾನದ ಅಧ್ಯಯನದಲ್ಲಿ ಬೆಳವಣಿಗೆ ಹಾಗೂ ‘ಹ್ಯೂಮಾನಿಟೀಸ್ ರಿವ್ಯೆ’ ಮಾನವಿಕ ವಿಭಾಗದ ವಾರ್ಷಿಕ ಸುದ್ದಿಪತ್ರ ಬಿಡುಗಡೆ ಕಾರ್ಯಕ್ರಮವನ್ನು ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್ ಎ ಜಾವೇದ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಸಮಾಜ ವಿಜ್ಞಾನದ 20ನೆ ಶತಮಾನದಲ್ಲಿ ಕಂಡು ಬಂದ ಅಧ್ಯಯನದ ಬೆಳವಣಿಗೆ ಕುರಿತು ವಿದ್ಯಾರ್ಥಿಗಳೊಳಿಗೆ ಉಪನ್ಯಾಸ ನೀಡಿದರು. ಸಮಾಜ ವಿಜ್ಞಾನದ ಅಧ್ಯಯನ ಜ್ಞಾನವು ಎಲ್ಲಾ ವಿಷಯಗಳಿಗೆ ವಿಸ್ತರಿಸಬೇಕು ಮತ್ತು ಯಾವುದೇ ವಿಷಯಗಳನ್ನು ಅರಿತು ಅನುಭವಿಸಿ ಸಾಕ್ಷೀಕರಿಸಿ ಅಧ್ಯಯನ ಮಾಡುವುದು ಅಗತ್ಯ ಈ ಮನೋಭಾವನೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.
ಆಳ್ವಾಸ್ ಕಾಲೇಜಿನ ಮಾನವಿಕ ವಿಭಾಗದ ಮುಖ್ಯಸ್ಥೆ ಸಂಧ್ಯಾ ಕೆ.ಎಸ್ ’ ಪ್ರಸ್ತುತ ಸಮಾಜದಲ್ಲಿ ಸಮಾಜ ವಿಜ್ಞಾನ ಅಧ್ಯಯನಗಳ ಪುನರ್ ಪರಿಶೀಲನೆಯ ಅಗತ್ಯಗಳನ್ನು ತಿಳಿಸಿದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ರಮೇಶ್ ಬಿ ಹಾಗೂ ಇತರ ಉಪನ್ಯಾಸಕ ವರ್ಗದವರು ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರಾಹುಲ್ ಕಾರ್ಯಕ್ರಮ ನಿರೂಪಿಸಿದರು. ವಿಭವ್ ಅತಿಥಿ ಪರಿಚಯ ನೀಡಿ, ನಾಗಮಣಿ ಸ್ವಾಗತಿಸಿ, ಮೇಘ ವಂದಿಸಿದರು.