ಉಬರ್ ಟ್ಯಾಕ್ಸಿ ಅಪರೇಟರುಗಳ ಮುಷ್ಕರ ತಾತ್ಕಾಲಿಕ ವಾಪಸ್
Update: 2017-08-14 21:48 IST
ಮಂಗಳೂರು, ಆ.14: ಉಬರ್ ಕಂಪೆನಿಯು ವಾರಕ್ಕೊಮ್ಮೆ ಬದಲಾಯಿಸುವ ದರ ನೀತಿಗಳಿಂದಾಗಿ ಮತ್ತು ಭತ್ತೆ ಕಡಿತದಿಂದ ತೀವ್ರ ನಷ್ಟಕ್ಕೊಳಗಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಮಂಗಳವಾರದಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ ಹೂಡುತ್ತಿದ್ದ ಆ್ಯಪ್ ಆಧಾರಿತ ಟ್ಯಾಕ್ಸಿ ಚಾಲಕರು ಸೋಮವಾರದಿಂದ ಮುಷ್ಕರವನ್ನು ವಾಪಸ್ ಪಡೆದಿದ್ದಾರೆ.
ಕಂಪೆನಿಯು ಸಕಾರಾತ್ಮಕವಾಗಿ ಸ್ಪಂದನೆ ನೀಡದೆ ಚಾಲಕರ ಬೇಡಿಕೆ ಪರಿಹರಿಸಲು ಕಾಲಾವಕಾಶ ಕೇಳಿದೆ. ಈ ಮಧ್ಯೆ ಹಬ್ಬಗಳ ಆಚರಣೆಯ ಸಮಯದಲ್ಲಿ ಜನರಿಗೆ ಸಂಭಾವ್ಯ ಅನಾನುಕೂಲತೆಯನ್ನು ತಪ್ಪಿಸಲು ಪ್ರಯಾಣಿಕರ ಹಿತದೃಷ್ಟಿಯಿಂದ ಉಬರ್ ಕಂಪೆನಿಗೆ ಸೆಪ್ಟೆಂಬರ್ ಮೊದಲ ವಾರದೊಳಗೆ ಅಪರೇಟರುಗಳ ಬೇಡಿಕೆ ಇತ್ಯರ್ಥಗೊಳಿಸಲು ಗಡುವು ನೀಡಿ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆಯುವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ದ.ಕ ಜಿಲ್ಲಾ ಆನ್‌ಲೈನ್ ಟ್ಯಾಕ್ಸಿ ಯೂನಿಯನ್ ಗೌರವಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.