‘ಬಿಳಿಯ ಶ್ರೇಷ್ಠತಾವಾದಿ’ಗಳನ್ನು ಖಂಡಿಸಲು ಹಿಂಜರಿದ ಟ್ರಂಪ್: ಸಮರ್ಥಿಸಿಕೊಳ್ಳಲು ಹೆಣಗಾಡಿದ ಶ್ವೇತಭವನ

Update: 2017-08-14 16:33 GMT

ವಾಶಿಂಗ್ಟನ್, ಆ. 14: ವರ್ಜೀನಿಯದಲ್ಲಿ ಶನಿವಾರ ‘ಬಿಳಿಯ ಶ್ರೇಷ್ಠತಾವಾದಿ’ಗಳು ನಡೆಸಿದ ಸಭೆಯಲ್ಲಿ ಹಿಂಸೆ ಸ್ಫೋಟಿಸಿದ ಬಳಿಕ, ಇಂಥ ಗುಂಪುಗಳನ್ನು ಖಂಡಿಸಲು ಆರಂಭದಲ್ಲಿ ಹಿಂಜರಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರೀ ಟೀಕೆಗೆ ಒಳಗಾಗಿದ್ದಾರೆ.

ಅದೇ ವೇಳೆ, ಈ ವಿಷಯದಲ್ಲಿ ಅಧ್ಯಕ್ಷರ ವಿರುದ್ಧ ಹೆಚ್ಚುತ್ತಿರುವ ಟೀಕೆಯನ್ನು ನಿಭಾಯಿಸಲು ಶ್ವೇತಭವನ ಹರಸಾಹಸ ಪಡುತ್ತಿದೆ.

ಗುಲಾಮಗಿರಿಯನ್ನು ಸಮರ್ಥಿಸಿದ್ದ ಎರಡನೆ ಮಹಾಯುದ್ಧ ಕಾಲದ ಅಮೆರಿಕದ ಸೇನಾ ಜನರಲ್ ರಾಬರ್ಟ್ ಇ. ಲೀ ನ ಪ್ರತಿಮೆಯನ್ನು ತೆರವುಗೊಳಿಸುವುದನ್ನು ಪ್ರತಿಭಟಿಸಿ ಬಿಳಿ ಜನಾಂಗೀಯವಾದಿಗಳು ಆಯೋಜಿಸಿದ್ದ ‘ಯುನೈಟ್ ದ ರೈಟ್’ ರ್ಯಾಲಿಗೆ ಮುನ್ನ ಹಿಂಸಾಚಾರ ಸ್ಫೋಟಿಸಿತ್ತು.

ಪರ-ವಿರೋಧ ಗುಂಪುಗಳ ನಡುವೆ ಘರ್ಷಣೆ ಭುಗಿಲೆದ್ದ ಸಂದರ್ಭದಲ್ಲಿ, ದುಷ್ಕರ್ಮಿಯೊಬ್ಬ ಗುಂಪೊಂದರ ಮೇಲೆ ಕಾರನ್ನು ನುಗ್ಗಿಸಿದಾಗ ಓರ್ವ ಮಹಿಳೆ ಮೃತಪಟ್ಟು ಹಲವಾರು ಮಂದಿ ಗಾಯಗೊಂಡರು.

ಅದೇ ವೇಳೆ, ಪ್ರತಿಭಟನೆಯ ಸ್ಥಳದಲ್ಲಿ ಗಸ್ತು ತಿರುಗುತ್ತಿದ್ದ ಹೆಲಿಕಾಪ್ಟರೊಂದು ಅಪಘಾತಕ್ಕೀಡಾಗಿ ಅದರಲ್ಲಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ.

ಘಟನೆಗೆ ಸಂಬಂಧಿಸಿ ಟ್ರಂಪ್ ಹೇಳಿಕೆಯೊಂದನ್ನು ನೀಡಿದರಾದರೂ, ‘ಬಿಳಿಯ ಶ್ರೇಷ್ಠತಾವಾದಿ’ಗಳನ್ನು ಅವರು ಉಲ್ಲೇಖಿಸಿಲ್ಲ.

ಘಟನೆ ನಡೆದು ಒಂದು ದಿನದ ಬಳಿ ಹೇಳಿಕೆಯೊಂದನ್ನು ಹೊರಡಿಸಿದ ಶ್ವೇತಭವನ ವಕ್ತಾರರೊಬ್ಬರು, ‘‘ಎಲ್ಲ ರೀತಿಯ ಹಿಂಸಾಚಾರ, ಅಸಹಿಷ್ಣುತೆ ಮತ್ತು ದ್ವೇಷವನ್ನು ತಾನು ಖಂಡಿಸುವುದಾಗಿ ಅಧ್ಯಕ್ಷರು ತನ್ನ ಹೇಳಿಕೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಖಂಡಿತವಾಗಿಯೂ, ಅವರ ಹೇಳಿಕೆಯಲ್ಲಿ ಬಿಳಿಯ ಶ್ರೇಷ್ಠತಾವಾದಿಗಳು, ಕೆಕೆಕೆ, ನಿಯೋ ನಾಝಿಗಳು ಮತ್ತು ಎಲ್ಲ ತೀವ್ರವಾದಿ ಗುಂಪುಗಳು ಒಳಗೊಂಡಿವೆ’’ ಎಂದು ಹೇಳಿದ್ದಾರೆ.

ಶನಿವಾರ ನ್ಯೂಜರ್ಸಿಯ ಬೆಡ್‌ಮಿನ್ಸ್‌ಟರ್‌ನಲ್ಲಿನ ಗಾಲ್ಫ್ ರಿಸಾರ್ಟ್‌ನಲ್ಲಿ ಮಾತನಾಡಿದ ಟ್ರಂಪ್, ಹಿಂಸಾಚಾರದಲ್ಲಿ ‘ಹಲವು ಗುಂಪುಗಳ’ ತಪ್ಪಿದೆ ಎಂದು ಹೇಳಿದ್ದರು.

ಶಾರ್ಲಟ್‌ವಿಲ್ ಹಿಂಸಾಚಾರದಲ್ಲಿ ಶಾಮೀಲಾದ ಕಡು ಬಲಪಂಥೀಯ ಗುಂಪುಗಳ ಬಗ್ಗೆ ಅವರು ಯಾವುದೇ ಪ್ರಸ್ತಾಪ ಮಾಡಲಿಲ್ಲ.

ಈ ಸಭೆಯಲ್ಲಿ ಜನರು ಶಸ್ತ್ರಧಾರಿಗಳಾಗಿ, ಸೇನಾ ಸಮವಸ್ತ್ರ ಧರಿಸಿ ಟ್ರಂಪ್ ಹ್ಯಾಟ್ ಮತ್ತು ಟಿ-ಶರ್ಟ್‌ಗಳನ್ನು ಧರಿಸಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News