ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣ: ಇಬ್ಬರ ಬಂಧನ

Update: 2017-08-15 15:17 GMT

ಮಂಗಳೂರು, ಆ. 15: ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಲಯ ಐಜಿಪಿ ಪಿ.ಹರಿಶೇಖರನ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿಯನ್ನು ನೀಡಿದ ಅವರು, ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ಅಬ್ದುಲ್ ಶಾಫಿ ಅಲಿಯಾಸ್ ಶಾಫಿ (36) ಮತ್ತು ಚಾಮರಾಜನಗರ ಗಾಳಿಪುರ ಗ್ರಾಮದ ಖಲೀಲುಲ್ಲಾ (30) ಎಂಬವರನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಗಳಲ್ಲಿ ಖಲೀಲುಲ್ಲಾ ಚಾಮರಾಜನಗರ ಪಿಎಫ್‌ಐ ಸಂಘಟನೆಯ ಅಧ್ಯಕ್ಷ ಎಂದು ಗುರುತಿಸಲಾಗಿದೆ. ಅಬ್ದುಲ್ ಶಾಫಿ ಪಿಎಫ್‌ಐ ಸಂಘಟನೆ ಕಾರ್ಯಕರ್ತ ಎಂಬುದರ ಬಗ್ಗೆ ಖಚಿತವಾಗಿಲ್ಲ ಎಂದರು.

ಬಂಧಿತ ಆರೋಪಿಗಳಿಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು. ಪ್ರಕರಣದಲ್ಲಿ ಇನ್ನೂ ಐವರು ಆರೋಪಿಗಳಿದ್ದು, ಅವರ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಶೀಘ್ರದಲ್ಲೇ ಅವರನ್ನೂ ಬಂಧಿಸುವುದಾಗಿ ಐಜಿಪಿ ಹೇಳಿದರು.

ಏಳು ಮಂದಿ ಅಧಿಕಾರಿಗಳ ತಂಡ ರಚನೆ
ಶರತ್ ಮಡಿವಾಳ ಕೊಲೆ ಪ್ರಕರಣದ ತನಿಖೆಗಾಗಿ 7 ಮಂದಿ ಅಧಿಕಾರಿಗಳ ತಂಡವನ್ನು ರಚಿಸಲಾಗಿದ್ದು, ತಂಡವು ಸುಮಾರು 30 ಮಂದಿಯನ್ನು ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೊಳಪಡಿಸಿದೆ. ತನಿಖಾ ತಂಡವು ಆರೋಪಿಗಳ ಪತ್ತೆಗಾಗಿ ಮಹಾರಾಷ್ಟ್ರ, ಕೇರಳ, ಬೆಂಗಳೂರು, ಶಿವಮೊಗ್ಗ, ಕಾರವಾರ ಮುಂತಾದ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿತ್ತು. ತಂಡ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಈ ಆರೋಪಿಗಳಿಂದ ಮಾಹಿತಿಗಳನ್ನು ಕಲೆ ಹಾಕಲಾಗಿದೆ. ತನಿಖಾ ತಂಡದ ಅಧಿಕಾರಿಗಳು ಹಗಲು ರಾತ್ರಿ ಎನ್ನದೆ ಒಂದು ತಿಂಗಳ ಕಾಲ ನಡೆಸಿದ ಸತತ ಪ್ರಯತ್ನದ ಫಲವಾಗಿ ಪ್ರಕರಣವನ್ನು ಭೇದಿಸಲು ಸಾಧ್ಯವಾಗಿದೆ ಎಂದರು.

ಜು. 4ರಂದು ರಾತ್ರಿ ಸುಮಾರು 9:30ಕ್ಕೆ ಬಿ.ಸಿ.ರೋಡ್‌ನ ಉದಯ ಲಾಂಡ್ರಿ ಅಂಗಡಿಯಲ್ಲಿ ಶರತ್ ಮಡಿವಾಳರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಹಾಕಿದ್ದರು. ರಕ್ತದ ಮಡವಿನಲ್ಲಿ ಬಿದ್ದಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜು. 7ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಘಟನೆಯ ಬಳಿಕ ಬಂಟ್ವಾಳ ತಾಲೂಕಿನಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತ್ತು. ಆರೋಪಿಗಳು ಶರತ್ ಮಡಿವಾಳ ಅವರನ್ನು ಯಾಕಾಗಿ ಹತ್ಯೆ ಮಾಡಿದ್ದಾರೆಂಬುದು ತನಿಖೆಯಿಂದ ತಿಳಿಯಬೇಕಾಗಿದೆ ಎಂದು ಐಜಿಪಿ ತಿಳಿಸಿದರು.
 

ತಂಡಕ್ಕೆ ಬಹುಮಾನ
ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ತಂಡಕ್ಕೆ ಐಜಿಪಿ ಹರಿಶೇಖರನ್‌ ಅವರು 25,000 ರೂ. ಬಹುಮಾನ ಘೋಷಿಸಿದರು.
ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಸುಧೀರ್ ಕುಮಾರ್ ರೆಡ್ಡಿ , ಎಸಿಪಿ ವೆಲೆಂಟೆನ್ ಡಿಸೋಜಾ ಉಪಸ್ಥಿತರಿದ್ದರು.

ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಐಜಿಪಿ ಪಿ.ಹರಿಶೇಖರನ್ ಮಾರ್ಗದರ್ಶನದಂತೆ ಎಸ್ಪಿ ಸಿ.ಎಚ್.ಸುಧೀರ್ ಕುಮಾರ್ ರೆಡ್ಡಿ ನೇತೃತ್ವದಲ್ಲಿ ಎಸಿಪಿ ವೆಲೆಂಟೆನ್ ಡಿಸೋಜಾ, ಇನ್ಸ್‌ಪೆಕ್ಟರ್ ಅಮಾನುಲ್ಲಾ ಖಾನ್, ಸುನೀಲ್ ನಾಯ್ಕ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News