ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು
ಕುಂದಾಪುರ, ಆ.15: ಕುಂದಾಪುರದ ಕಾಲೇಜೊಂದರಲ್ಲಿ ಇಂದು ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿ, ಹಟ್ಟಿಕುದ್ರು ನಿವಾಸಿ ಆನಂದ ಹಾಗೂ ಸುಗಂಧಿ ದಂಪತಿ ಪುತ್ರ ಅಮಿತ್ ಪೂಜಾರಿ (18) ಎಂದು ಗುರುತಿಸಲಾಗಿದೆ.
ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅಮಿತ್ ಪೂಜಾರಿ, ಇಂದು ಕಾಲೇಜಿನ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಳಿಕ ಕಾಲೇಜಿನ ಸಭಾಂಗಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಕುಳಿತ್ತಿದ್ದರು. ಈ ಸಂದರ್ಭ ಅಮಿತ್‌ಗೆ ಎದೆನೋವು ಕಾಣಿಸಿ ಕೊಂಡು ಕುಳಿತಲ್ಲೇ ಕುಸಿದು ಬಿದ್ದರೆನ್ನಲಾಗಿದೆ.
ತಕ್ಷಣ ಅವರನ್ನು ಕಾಲೇಜಿನ ಅಧ್ಯಾಪಕರು ಹಾಗೂ ಸಹಪಾಠಿಗಳು ಆಸ್ಪತ್ರೆಗೆ ಸಾಗಿಸಿದರು. ಆದರೆ ದಾರಿ ಮಧ್ಯೆ ಅಮಿತ್ ಮೃತಪಟ್ಟರು ಎಂದು ತಿಳಿದುಬಂದಿದೆ. ಆನಂದ ಅವರ ಪ್ರಥಮ ಪುತ್ರನಾಗಿರುವ ಅಮಿತ್, ತಂದೆ ತಾಯಿ ಸಹಿತ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.