ಬಾಂಗ್ಲಾದಲ್ಲಿ ನೆರೆಹಾವಳಿ: 27 ಮಂದಿ ಸಾವು

Update: 2017-08-15 17:03 GMT

ಢಾಕ, ಆ.15: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಬಾಂಗ್ಲಾದೇಶದ ಸುಮಾರು 20ಕ್ಕೂ ಹೆಚ್ಚು ಜಿಲ್ಲೆ ಪ್ರವಾಹ ಪೀಡಿತವಾಗಿದ್ದು ಸುಮಾರು ಆರು ಲಕ್ಷ ಮಂದಿ ಸಂಕಷ್ಟಕ್ಕೀಡಾಗಿದ್ದಾರೆ. ಕನಿಷ್ಟ 27 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

   ಮೇಲ್ಭಾಗದಲ್ಲಿರುವ ಚೀನಾ, ಭಾರತ, ನೇಪಾಲ ಮತ್ತು ಭೂತಾನ್ ದೇಶಗಳಲ್ಲೂ ತೀವ್ರ ಪ್ರವಾಹದ ಪರಿಸ್ಥಿತಿ ಉಂಟಾಗಿರುವ ಕಾರಣ ಬಾಂಗ್ಲಾಕ್ಕೆ ಇನ್ನಷ್ಟು ಸಂಕಷ್ಟದ ಭೀತಿ ಎದುರಾಗಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆಯ ಸಚಿವ ಮೊಫಝಲ್ ಹೊಸೈನ್ ಚೌಧುರಿ ತಿಳಿಸಿದ್ದು ಇದುವರೆಗೆ 3,68,586 ಸಂತ್ರಸ್ತರನ್ನು ನೆರೆಸಂತ್ರಸ್ತರ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದಿದ್ದಾರೆ. ದೇಶದಲ್ಲಿರುವ ನಾಲ್ಕು ಪ್ರಮುಖ ಜಲಸಂಗ್ರಹಾಗಾರಗಳ ಪೈಕಿ ಮೂರರಲ್ಲಿ ನೀರಿನ ಮಟ್ಟ ನಿರಂತರವಾಗಿ ಹೆಚ್ಚುತ್ತಿರುವ ಬಗ್ಗೆ ಪ್ರವಾಹ ಮುನ್ಸೂಚನೆ ಕೇಂದ್ರ ಎಚ್ಚರಿಕೆ ನೀಡಿದೆ. ಕುರಿಗ್ರಾಮ್ ಎಂಬಲ್ಲಿಯ ಸುಮಾರು 60,000 ಕುಟುಂಬಗಳನ್ನು ಮತ್ತು ನಿಲ್ಫಾಮರಿ ಗ್ರಾಮದಿಂದ 400 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ . ಕೆಲವು ಆಂತರಿಕ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. ಜಲಪ್ರಳಯದ ಹಿನ್ನೆಲೆಯಲ್ಲಿ , ಸಂಭಾವ್ಯ ಆಹಾರಪದಾರ್ಥಗಳ ಕೊರತೆಯನ್ನು ಸರಿದೂಗಿಸಲು ವಿದೇಶದಿಂದ ಆಹಾರವಸ್ತುಗಳನ್ನು ಆಮದು ಮಾಡಿಕೊಳ್ಳಬೇಕೆಂದು ಪ್ರಧಾನಿ ಶೇಖ್ ಹಸೀನಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News