ಸವಾಲುಗಳನ್ನು ಸ್ವೀಕರಿಸುವ ಮನೋಭಾವ ನಮ್ಮದಾಗಲಿ: ಶಕುಂತಳಾ ಶೆಟ್ಟಿ
ಪುತ್ತೂರು, ಆ. 15: ಸ್ವಾತಂತ್ರ್ಯವಿಲ್ಲದಿದ್ದಲ್ಲಿ ನಮ್ಮ ಬದುಕು ಏನಾಗುತ್ತಿತ್ತು ಎನ್ನುವುದನ್ನು ಕಲ್ಪಿಸಲೂ ಅಸಾಧ್ಯ. ನಮ್ಮ ಹಿರಿಯರು ತ್ಯಾಗ, ಬಲಿದಾನದಲ್ಲಿ, ಹಿಂಸೆ, ಅಹಿಂಸೆಯಲ್ಲಿ ನಮಗೆ ಒದಗಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದರೊಂದಿಗೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸವಾಲುಗಳನ್ನು ಸ್ವೀಕರಿಸುವ ಮನೋಭಾವ ನಮ್ಮದಾಗಬೇಕು ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪುತ್ತೂರಿನ ಪುರಭವನದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲ್ಲು ಹೊಡೆಯುವ, ಕೊಲೆ ಮಾಡುವ, ಕೋಮುವಾದ ಮಾಡುವ, ಭ್ರಷ್ಟಾಚಾರದ ಸ್ವಾತಂತ್ರ್ಯ ಬದಲಾಗಬೇಕು. ಮಾನವೀಯ ಮೌಲ್ಯಗಳನ್ನು ರೂಪಿಸಿಕೊಳ್ಳುವುದರೊಂದಿಗೆ ಪರಸ್ಪರ ಪ್ರೀತಿ ವಿಶ್ವಾಸ ಬೆಳೆಸುವ ಕೆಲಸವಾಗಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಜೆಸಿಐ ರಾಷ್ಟ್ರೀಯ ತರಬೇತುದಾರ ಕೃಷ್ಣ ಮೋಹನ್ ಪಿ.ಎಸ್ ಅವರು ನಮ್ಮ ದೇಶ, ಜನಪ್ರತಿನಿಧಿಗಳು ಸರಿಯಿಲ್ಲ ಎಂದು ಟೀಕಿಸುವ ನಾವು ಸ್ವತಃ ನಾವೆಷ್ಟು ಸರಿಯಾಗಿದ್ದೇವೆ ಎಂಬುದನ್ನು ವಿಮರ್ಷಿಸಬೇಕಾಗಿದೆ. ಕಸ ಕಲ್ಮಷಗಳಿಂದ, ಭ್ರಷ್ಟಾಚಾರಗಳಿಂದ, ಧರ್ಮ ವೈಷಮ್ಯದಿಂದ, ಗಲಭೆ, ದೊಂಬಿ ನಷ್ಟದಿಂದ, ಸೋಮಾರಿಗಳಿಂದ ತುಂಬಿ ಹೋಗಿರುವ ನಮ್ಮವರನ್ನು ಪರಿವರ್ತಿಸುವ ಕೆಲಸ ನಮ್ಮಿಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಕ್ಯಾ. ಚಿದಾನಂದ ನಾಡಾಜೆ ಮತ್ತು ಕ್ಯಾ. ಎಂ.ಎಸ್. ಸತ್ಯನಾರಾಯಣ ರಾವ್ ಅವರನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು. ಬಳಿಕ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ಭೂಷಣ್ ಕುಮಾರ್, ದ್ವಿತೀಯ ಸ್ಥಾನ ಪಡೆದ ರಕ್ಷಿತಾ ಮತ್ತು ತೃತೀಯ ಸ್ಥಾನ ಪಡೆದ ಹೇಮಂತ್ ಅವರಿಗೆ ಸಾರ್ವಜನಿಕರ ಶಿಕ್ಷಣ ಇಲಾಖೆಯ ವತಿಯಿಂದ ಉಚಿತವಾಗಿ ನೀಡಲಾದ ಲ್ಯಾಪ್‌ಟಾಪ್ ಹಸ್ತಾಂತರಿಸಿದರು.
ಪುಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು ಮಾತನಾಡಿದರು. ಉಪವಿಭಾಗಾಧಿಕಾರಿ ಡಾ. ರಘುನಂದನ್ ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎನ್ ಉಪಸ್ಥಿತರಿದ್ದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಸಿಲ್ದಾರ್ ಅನಂತಶಂಕರ್ ಸ್ವಾಗತಿಸಿದರು. ಉಪತಹಸೀಲ್ದಾರ್ ಶ್ರೀಧರ್ ವಂದಿಸಿದರು. ಶಿಕ್ಷಕ ರಮೇಶ್ ಉಳಯ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.