ಬೌದ್ಧಿಕ ಆಸ್ತಿ ವ್ಯವಹಾರ ತನಿಖೆಗೆ ಮುಂದಾದರೆ ಪ್ರತೀಕಾರ ಕ್ರಮ: ಅಮೆರಿಕಕ್ಕೆ ಚೀನಾದ ಎಚ್ಚರಿಕೆ

Update: 2017-08-15 16:42 GMT

ಬೀಜಿಂಗ್, ಆ.15: ತನ್ನ ಬೌದ್ಧಿಕ ಆಸ್ತಿ ವ್ಯವಹಾರದ ಬಗ್ಗೆ ಅಮೆರಿಕ ತನಿಖೆಗೆ ಮುಂದಾದರೆ ತಾನು ಸುಮ್ಮನಿರುವುದಿಲ್ಲ ಎಂದು ಚೀನಾ ಎಚ್ಚರಿಸುವುದರೊಂದಿಗೆ ಉಭಯ ರಾಷ್ಟ್ರಗಳ ನಡುವಿನ ವ್ಯವಹಾರ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದೆ. ವಿಶ್ವಸಂಸ್ಥೆಯ ನಿರ್ಬಂಧಕ್ಕೆ ಕಾರಣವಾಗಬಲ್ಲ ‘ವ್ಯಾಪಾರ ತನಿಖೆಗೆ’ ಚೀನಾ ತೀವ್ರ ಪ್ರತಿರೋಧ ವ್ಯಕ್ತಪಡಿಸಿದೆ.

 ಉತ್ತರಕೊರಿಯಾದ ಮೇಲೆ ವಿಶ್ವಸಂಸ್ಥೆ ನಿರ್ಬಂಧ ಹೇರಿದ್ದರೂ ಆ ದೇಶದೊಡನೆ ಸಂಬಂಧ ಕಡಿದುಕೊಳ್ಳದಿರುವ ಚೀನಾದ ಧೋರಣೆ ಬಗ್ಗೆ ಅಸಮಾಧಾನಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದ ವ್ಯಾಪಾರ ಕ್ರಮದ (ಬೌದ್ಧಿಕ ಆಸ್ತಿ ವ್ಯವಹಾರ) ಬಗ್ಗೆ ತನಿಖೆ ನಡೆಸುವಂತೆ ಅಮೆರಿಕದ ವ್ಯಾಪಾರ ಪ್ರತಿನಿಧಿ ರೋಬರ್ಟ್ ಲಿಥಿಸೆರ್‌ಗೆ ಆದೇಶ ನೀಡಿದ್ದರು. ಚೀನಾದ ಕಾರ್ಯನೀತಿ ಅಮೆರಿಕದ ಸಂಸ್ಥೆಗಳು ಅಥವಾ ಅಮೆರಿಕದ ಹೂಡಿಕೆದಾರರ ಮೇಲೆ ಪರಿಣಾಮ ಬೀರುತ್ತಿದೆಯೇ ಎಂದು ವರದಿ ಸಲ್ಲಿಸುವಂತೆ ಟ್ರಂಪ್ ಸೂಚಿಸಿದ್ದರು.

   ನಿಯಮಕ್ಕೆ ವಿರುದ್ಧವಾಗಿ ಅಮೆರಿಕನ್ ಸಂಸ್ಥೆಗಳ ವೌಲ್ಯಯುತ ತಂತ್ರಜ್ಞಾನವನ್ನು ವರ್ಗಾಯಿಸಲು ಬಲವಂತಗೊಳಿಸುವ ಯಾವುದೇ ರಾಷ್ಟ್ರದ ಕ್ರಮವನ್ನು ನಾವು ಸಹಿಸುವುದಿಲ್ಲ. ಅಮೆರಿಕನ್ನರ ಉದ್ಯೋಗ ನಷ್ಟಗೊಳಿಸುವ ಯಾವುದೇ ಸಂಚನ್ನು ನಾವು ನಾಶಗೊಳಿಸುತ್ತೇವೆ ಎಂದು ಟ್ರಂಪ್ ಹೇಳಿದ್ದರು. ಮುದ್ರಾಧಿಕಾರ, ಪೇಟೆಂಟ್, ಟ್ರೇಡ್‌ಮಾರ್ಕ್, ವ್ಯಾಪಾರ ರಹಸ್ಯ ಮುಂತಾದ ನಮ್ಮ ಬೌದ್ಧಿಕ ಆಸ್ತಿಯ ರಕ್ಷಣೆಗೆ ನಾವು ಕಟಿಬದ್ಧರಾಗಿದ್ದೇವೆ. ನಮ್ಮ ಭದ್ರತೆ ಹಾಗೂ ಉನ್ನತಿಗೆ ಪೂರಕವಾಗಿರುವ ಬೌದ್ಧಿಕ ಆಸ್ತಿಯ ರಕ್ಷಣೆಯ ಬಗ್ಗೆ ಅಮೆರಿಕ ಇನ್ನೆಂದೂ ಕುರುಡುಮನೋಭಾವ ಹೊಂದಿರದು ಎಂದು ಟ್ರಂಪ್ ಹೇಳಿಕೆ ನೀಡಿದ್ದರು.

  ಚೀನಾವು ಅಮೆರಿಕದ ವ್ಯಾಪಾರ ರಹಸ್ಯವನ್ನು ಕದಿಯುತ್ತಿರುವುದನ್ನು ಇನ್ನೆಂದೂ ಸಹಿಸಲಾಗದು. ಆದ್ದರಿಂದ ಕೂಲಂಕುಷ ತನಿಖೆ ನಡೆಸಲಾಗುವುದು ಮತ್ತು ಅಗತ್ಯಬಿದ್ದರೆ ಅಮೆರಿಕದ ಸಂಸ್ಥೆಗಳ ಭವಿಷ್ಯದ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರೋಬರ್ಟ್ ಲಿಥಿಸೆರ್ ಹೇಳಿದ್ದಾರೆ.

ಈ ಬಗ್ಗೆ ಚೀನಾದ ವಾಣಿಜ್ಯ ಸಚಿವಾಲಯವು ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ‘ತೀವ್ರ ಕಳವಳ’ ವ್ಯಕ್ತಪಡಿಸಲಾಗಿದ್ದು, ಅಮೆರಿಕ ತನ್ನ ವ್ಯಾಪಾರ ಹಿತಾಸಕ್ತಿಯ ನೆಪದಿಂದ ಕೈಗೊಳ್ಳುವ ಯಾವುದೇ ಕ್ರಮವೂ ದ್ವಿಪಕ್ಷೀಯ ವ್ಯಾಪಾರ ಸಂಬಂಧಕ್ಕೆ ಹಾನಿ ಉಂಟುಮಾಡುತ್ತದೆ ಎಂದು ಕಠಿಣ ಎಚ್ಚರಿಕೆ ನೀಡಲಾಗಿದೆ. ಉಭಯ ರಾಷ್ಟ್ರಗಳ ನಡುವಿನ ಸಂಬಂಧಕ್ಕೆ ಅಹಿತಕರವಾದ ರೀತಿಯಲ್ಲಿ ಮತ್ತು ಬಹುಪಕ್ಷೀಯ ವ್ಯಾಪಾರ ನಿಯಮಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಅಮೆರಿಕ ವರ್ತಿಸಿದರೆ ಚೀನಾ ಸುಮ್ಮನಿರದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಚೀನಾದ ಕಾನೂನುಬದ್ಧ ಹಕ್ಕು ಮತ್ತು ಹಿತಾಸಕ್ತಿಯನ್ನು ಸಮರ್ಥವಾಗಿ ರಕ್ಷಿಸಿಕೊಳ್ಳಲು ಚೀನಾ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

  ಅಮೆರಿಕವು ಚೀನಾದ ಎರಡನೇ ಅತೀ ದೊಡ್ಡ ವ್ಯಾಪಾರ ಸಹಭಾಗಿ ರಾಷ್ಟ್ರವಾಗಿದೆ. (ಯುರೋಪಿಯನ್ ಒಕ್ಕೂಟ ಮೊದಲ ಸ್ಥಾನದಲ್ಲಿದೆ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News