×
Ad

ವಿವಿಧತೆಯಲ್ಲಿ ಏಕತೆಯಿಂದ ಗಳಿಸಿದ ಸ್ವಾತಂತ್ರ್ಯ: ಯಾಸರ್ ಅರಾಫತ್ ಕೌಸರಿ

Update: 2017-08-15 22:34 IST

ಮೂಡುಬಿದಿರೆ, ಅ.15 : ಶಾಂತಿ ಸಹಬಾಳ್ವೆಯ ಶಕ್ತಿ ಮತ್ತು ಶೌರ್ಯವಂತ ವೀರ ಸೇನಾನಿಗಳು ರಕ್ತ ಹರಿಸಿ, ಜೀವ ಪಣಕ್ಕಿಟ್ಟು ಭಾರತ ಸ್ವತಂತ್ರ್ಯಗೊಂಡಿದೆ. ದೇಶದ ಎಲ್ಲ ದಿಕ್ಕುಗಳಿಂದ ಸ್ವಾತಂತ್ರ್ಯಕ್ಕಾಗಿ ಯುದ್ಧ ಕಹಳೆ ಮೊಳಗಿತ್ತು. ಇದು ಇಂಗ್ಲೀಷರ ಸ್ಥೈರ್ಯ ಉಡುಗಿಹೋಗಲು ಕಾರಣವಾಗಿತ್ತು. ಜಾತಿಗಳ ನಡುವೆ ತಿಕ್ಕಾಟ ತಂದಿಟ್ಟು ಯಶಸ್ಸು ಕಾಣುವ ಹವಣಿಕೆಯಲ್ಲಿದ್ದ ಬ್ರಿಟಿಷರಿಗೆ ಭಾರತೀಯರು ಸೌಹಾರ್ಧಯುತವಾಗಿ ಬಾಳಿ ಬದುಕಿ ತಕ್ಕ ಪ್ರತ್ಯುತ್ತರ ನೀಡಿದ್ದರು. ಎಲ್ಲಾ ಜಾತಿ ಮತ ಧರ್ಮಗಳ ಜನರು ಒಂದಾಗಿ ಹೋರಾಡಿದ್ದರ ಪರಿಣಾಮವಾಗಿ ನಾವಿಂದು ಪ್ರಜಾಪ್ರಭುತ್ವ ದೇಶದ ಪ್ರಜೆಗಳಾಗಿದ್ದೇವೆ. ಈ ಸ್ವಾತಂತ್ರ್ಯವನ್ನು ನಾವು ಉಳಿಸಬೇಕಾಗಿದೆ ಎಂದು ವಾಗ್ಮಿ ಯಾಸರ್ ಅರಾಫತ್ ಕೌಸರಿ ಹೇಳಿದರು.

ಅವರು ಮೂಡುಬಿದಿರೆಯ ವಲಯ ಎಸ್‌ಕೆಎಸ್‌ಎಸ್‌ಎಫ್ ವತಿಯಿಂದ ತೋಡಾರು ಜಂಕ್ಷನ್‌ನಲ್ಲಿ ನಡೆದ ರಾಷ್ಟ್ರ ರಕ್ಷಣೆಗೆ ಸೌಹಾರ್ಧ ಸಂಕಲ್ಪಅಭಿಯಾನದಂಗವಾಗಿ ಪ್ರೀಡಂ ಸ್ಕ್ವಾರ್ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು.

ವಿವಿಧತೆಯಲ್ಲಿ ಏಕರಾಗಿ ಬದುಕುತ್ತಿರುವ ಭಾರತೀಯ ಪ್ರಜೆಗಳ ನಡುವೆ ವಿಷಬೀಜ ಬಿತ್ತಿ ಕಳಂಕಗೊಳಿಸುವ ಒಂದು ವರ್ಗ ಕಾರ್ಯನಿರತವಾಗಿದೆ. ಆದರೆ ಅವರು ಕೂಡ ಬ್ರಿಟಿಷರಂತೆ ವೈಫಲ್ಯ ಕಾಣಲಿದ್ದಾರೆ. ನಾವು ಅಂದು ಸ್ವತಂತ್ರರಾದಾಗ ಗಾಂಧೀಜಿಯವರು ಮೌನಕ್ಕೆ ಜಾರಿದ್ದರು. ಈ ಬಗ್ಗೆ ಅವರಲ್ಲಿ ಕಾರಣ ಕೇಳಲಾಗಿ ಗಳಿಸಿದ ಸ್ವಾತಂತ್ರ್ಯ ಉಳಿಸಿಕೊಳ್ಳುವುದು ನಮ್ಮ ಮುಂದಿರುವ ಸವಾಲು ಎಂಬ ಉತ್ತರ ಅವರಿಂದ ದೊರಕಿತ್ತು. ಗಾಂಧಿಯವರ ತತ್ವ ಚಿಂತನೆಗಳು ಈ ನಿಟ್ಟಿನಲ್ಲಿ ಇಂದಿಗೂ ಪ್ರಸ್ತುತವಾಗಿದೆ ಎಂದರು.

ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವೇ ಮೂ ಈಶ್ವರ ಭಟ್ ಅವರು ಸೌಹಾರ್ಧ ಭಾಷಣ ಮಾಡುತ್ತಾ ಎಲ್ಲ ಧರ್ಮಗಳ ಮಹನೀಯರೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಸ್ವಾತಂತ್ರ್ಯಾಚರಣೆ ದೇಶದ ಉತ್ಸವ. ಜಾತಿ ಧರ್ಮಗಳ ಆಧಾರದಲ್ಲಿ ದ್ವೇಷಗಳನ್ನು ಬೆಳೆಸಿಕೊಳ್ಳದೆ ದೇಶದ ಅಭಿವೃದ್ಧಿಗೆ ಕಾರಣವಾಗುವ ನಾಗರಿಕ ಸಮಾಜ ನಮ್ಮದಾಗಬೇಕು. ನ್ಯಾಯಪರತೆಯನ್ನು ಸಮಾಜ ಹೆಚ್ಚಿಸಿಕೊಂಡಾಗ ಶಾಂತಿ ಸಹಬಾಳ್ವೆ ಸಾಧ್ಯವಾಗುತ್ತದೆ ಎಂದರು.
ಅಲಂಗಾರು ಹೋಲಿ ರೋಸರಿ ಚರ್ಚ್‌ನ ಧರ್ಮಗುರು ಸುನಿಲ್ ವೇಗಸ್ ಮಾತನಾಡಿ ದೇವರು ತನ್ನ ಸೃಷ್ಟಿಗಳಿಗೆ ಅವರಿಗೆ ಸಮಯವನ್ನು ದಯಪಾಲಿಸಿದ್ದಾನೆ. ಆ ಸಮಯವನ್ನು ಬಳಸಿಕೊಳ್ಳುವ ಸ್ವಾತಂತ್ರ್ಯವನ್ನು ಅವನು ಅವರಿಗೆ ಮೀಸಲಿಟ್ಟಿದ್ದಾನೆ. ಸಮಯವನ್ನು ಒಳ್ಳೆಯದು ಹಾಗೂ ಕೆಟ್ಟದ್ದು ಎಂಬುದಾಗಿ ಎರಡು ವರ್ಗಗಳಲ್ಲಿ ಬಳಸಿಕೊಳ್ಳುವ ಬುದ್ದಿಶಕ್ತಿ ಜನರಿಗಿದೆ. ಆ ಸ್ವಾತಂತ್ರ್ಯದ ಸದುಪಯೋಗ ಆಗಬೇಕಿದೆ. ಸ್ವಾತಂತ್ರ್ಯವಿದೆ ಎಂದು ಅದರ ದುರುಪಯೋಗ ಸಲ್ಲದು ಎಂದರು.

ತೋಡಾರು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಸಲೀಮ್ ಫೈಝಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗುರುಸ್ವಾಮಿ ಶಿವರಾಯ ಪೈ ತೋಡಾರು, ಹಾಜಿ ಹೆಚ್.ಎಮ್. ಅಬ್ದುಲ್ ಖಾದರ್, ಮುಹಮ್ಮದ್ ಇಕ್ಬಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮೂಡುಬಿದಿರೆಯ ವಲಯ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಮಾಲಿಕ್ ಅಝೀರ್ ಉಪಸ್ಥಿತರಿದ್ದರು.

ತೋಡಾರು ಎಸ್ಕೆಎಸ್ಸೆಸ್ಸೆಫ್ ಕಾರ್ಯದರ್ಶಿ ಅಲ್ತಾಫ್ ಮುಸ್ಲಿಯಾರ್ ಪ್ರೀಡಂ ಸ್ಕ್ವ್ಯಾರ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಉಸ್ಮಾನ್ ಸೂರಿಂಜೆ ಸ್ವಾಗತಿಸಿದರು. ತೋಡಾರು ಸಂಶುಲ್ ಉಲಮಾ ಅರೇಬಿಕ್ ಕಾಲೇಜಿನ ವಿದ್ಯಾರ್ಥಿಗಳಾದ ಖಲಂದರ್ ವೇಣೂರು, ಸ್ವಾಬಿರ್ ಈಶ್ವರಮಂಗಲ ಕಾರ್ಯಕ್ರಮ ನಿರೂಪಿಸಿದರು. ಫಾರೂಕ್ ವಿಶಾಲನಗರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News