ಬಿಜೆಪಿ ಸರಕಾರದಲ್ಲಿ ಮನುಷ್ಯ ಜೀವಕ್ಕೆ ಬೆಲೆ ಇಲ್ಲ: ಅಮೃತ್ ಶೆಣೈ
ಉಡುಪಿ, ಆ.16: ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಉತ್ತರ ಪ್ರದೇಶದ ಘೋರಖ್‌ಪುರದ ಸರಕಾರಿ ಆಸ್ಪತ್ರೆ ಯಲ್ಲಿ ಆಕ್ಸಿಜನ್ ಸೌಲಭ್ಯ ಇಲ್ಲದೆ ಸಾವಿಗೀಡಾದ ಮಕ್ಕಳಿಗೆ ಶೃದ್ಧಾಂಜಲಿ ಸಭೆಯನ್ನು ಬುಧವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಆಯೋಜಿಸಲಾಗಿತ್ತು.
ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಕ್ಯಾಂಡಲ್ ಹಚ್ಚಿ ಮೃತ ಮಕ್ಕಳಿಗೆ ಶೃದ್ಧಾಂಜಲಿ ಸಲ್ಲಿಸಿದರು. ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ, ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ಆಮ್ಲ ಜನಕ ಕೊರತೆಯಿಂದ ಮಕ್ಕಳು ಮೃತಪಟ್ಟಿರುವುದು ತಲೆತಗ್ಗಿಸುವ ವಿಚಾರ ವಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ನಂತರ ಈ ದೇಶದಲ್ಲಿ ಮಾನವೀಯತೆಗೆ ಕಳಂಕ ತರುವ ಕೆಲಸಗಳು ನಡೆಯುತ್ತಿವೆ ಎಂದು ದೂರಿದರು.
ಉತ್ತರ ಪ್ರದೇಶದ ಬಿಜೆಪಿ ಸರಕಾರವು ಮನುಷ್ಯರ ಜೀವವನ್ನು ಹಗುರವಾಗಿ ಪರಿಗಣಿಸುತ್ತಿವೆ ಎಂಬುದಕ್ಕೆ ಈ ದುರ್ಘಟನೆಯೇ ಸಾಕ್ಷಿ. ಸರಕಾರಗಳು ಮನುಷ್ಯ ಜೀವದ ಘನತೆಯನ್ನು ಹೆಚ್ಚಿಸುವ ಕೆಲಸ ಮಾಡಬೇಕೇ ಹೊರತು ಈ ರೀತಿ ಯಾಗಿ ನಿರ್ಲಕ್ಷ ಮಾಡುವುದು ಖಂಡನೀಯ ಎಂದು ಅವರು ತಿಳಿಸಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ವರೋನಿಕ ಕರ್ನೆಲಿಯೋ ಮಾತನಾಡಿ, ಈ ಘಟನೆಗೆ ಉತ್ತರ ಪ್ರದೇಶದ ಸರಕಾರದ ನಿರ್ಲಕ್ಷವೇ ಕಾರಣ. ಇಲ್ಲಿನ ಸರಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲ ಎಂಬುದು ಇದರಿಂದ ಬಹಿ ರಂಗವಾಗುತ್ತದೆ. ಸರಕಾರ ಹಣ ಪಾವತಿಸದ ಕಾರಣಕ್ಕೆ ಆಕ್ಸಿಜನ್ ಪೂರೈಕೆ ಸ್ಥಗಿತಗೊಳಿಸಿರುವುದು ನಾಚಿಕೆಗೇಡು. ಅಲ್ಲಿನ ಸರಕಾರ ಈ ಘಟನೆಯನ್ನು ಲಘುವಾಗಿ ಪರಿಗಣಿಸದೆ, ಗಂಭೀರವಾಗಿ ತೆಗೆದುಕೊಂಡು ಎಲ್ಲ ಕುಟಂಬಗಳಿಗೆ ಸಾಂತ್ವನ ಹೇಳುವುದರ ಜೊತೆಗೆ ಪರಿಹಾರವನ್ನು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಮುಖಂಡರಾದ ಸರಳಾ ಕಾಂಚನ್, ಡಾ. ಸುನೀತಾ ಶೆಟ್ಟಿ, ಜನಾರ್ದನ ಭಂಡಾರ್ಕರ್, ಗೀತಾ ವಾಗ್ಳೆ, ಚಂದ್ರಿಕಾ ಶೆಟ್ಟಿ, ಗೋಪಿ ನಾಯ್ಕಿ ಮೊದಲಾದವರು ಉಪಸ್ಥಿತರಿದ್ದರು.