ಕಾಶ್ಮೀರ ಉಗ್ರರಿಗೆ ಆರ್ಥಿಕ ನೆರವು ಪ್ರಕರಣ: ಉದ್ಯಮಿ ವತಾಲಿ ಸಂಬಂಧಿಕರ ಮನೆಗೆ ಎನ್‌ಐಎ ದಾಳಿ

Update: 2017-08-16 13:28 GMT

ಹೊಸದಿಲ್ಲಿ, ಆ.16: ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಮಿತಿ (ಎನ್‌ಐಎ) , ಪ್ರಭಾವೀ ಉದ್ಯಮಿ ಝಹೂರ್ ವತಾಲಿ ಸಂಬಂಧಿಕರ, ಕುಟುಂಬದವರ ಹಾಗೂ ನಿಕಟವರ್ತಿಗಳ ಮನೆ ಸೇರಿದಂತೆ ಶ್ರೀನಗರ ಮತ್ತು ಉತ್ತರ ಕಾಶ್ಮೀರದ ಒಟ್ಟು 12 ಸ್ಥಳಗಳಿಗೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದೆ.

 ಶ್ರೀನಗರದ ಖ್ಯಾತ ಉದ್ಯಮಿಯಾಗಿರುವ ವತಾಲಿಯನ್ನು ಕಳೆದ 2 ತಿಂಗಳಿನಿಂದ ಹಲವು ಬಾರಿ ಎನ್‌ಐಎ ವಿಚಾರಣೆ ನಡೆಸಿದೆ. ಪ್ರಮುಖ ರಾಜಕಾರಣಿಗಳು ಹಾಗೂ ಪ್ರತ್ಯೇಕತಾವಾದಿ ನಾಯಕರ ಜೊತೆ ನಿಕಟ ಸಂಪರ್ಕ ಹೊಂದಿರುವ ವತಾಲಿಗೆ ಸೇರಿದ ಆಸ್ತಿಗಳು ದಿಲ್ಲಿ, ಮುಂಬೈ, ಚಂಡೀಗಡ ಮತ್ತು ದುಬೈಯಲ್ಲೂ ಇರುವುದನ್ನು ಎನ್‌ಐಎ ಗಮನಿಸಿದೆ . ಇದೀಗ ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ದಾಳಿ ನಡೆಸಲಾಗಿದ್ದು, ಕಣಿವೆ ರಾಜ್ಯದಲ್ಲಿ ಅಶಾಂತಿ ಹಬ್ಬಲು ಕಾರಣವಾಗಿರುವ ಅಂಶದ ಕುರಿತು ದಾಖಲೆಗಳು ಲಭ್ಯವಾಗಲಿವೆ ಎಂದು ನಿರೀಕ್ಷಿಸಿರುವುದಾಗಿ ಎನ್‌ಐಎ ಅಧಿಕಾರಿಯೋರ್ವರು ತಿಳಿಸಿದ್ದಾರೆ.

 ವತಾಲಿಯ ಮೂವರು ನಿಕಟವರ್ತಿಗಳು, ಇಬ್ಬರು ಸಂಬಂಧಿಗಳು(ಪತ್ನಿಯ ಸೋದರರು), ವತಾಲಿಗೆ ನಿಕಟವಾಗಿರುವ ವಕೀಲ ಶಾಫಿ ರಿಶಿ, ವತಾಲಿಯ ವಾಹನಚಾಲಕ ಮುಹಮ್ಮದ್ ಅಕ್ಬರ್‌ನ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಅಲ್ಲದೆ ಪೀರ್‌ಝಾದ ಗುಲಾಂ ನಬಿ ಎಂಬವರ ಒಡೆತನದ ಪ್ಲೈವುಡ್ ಕಾರ್ಖಾನೆಯ ಮ್ಯಾನೇಜರ್ ಗುಲಾಂ ಮುಹಮ್ಮದ್ ಭಟ್ಟ್ ನಿವಾಸದ ಮೇಲೂ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಎನ್‌ಐಎ ಕಸ್ಟಡಿಯಲ್ಲಿರುವ 7 ಮಂದಿ ಪ್ರತ್ಯೇಕತಾದಿಗಳು ನೀಡಿದ ಮಾಹಿತಿಯ ಮೇರೆಗೆ ಈ ದಾಳಿ ಮತ್ತು ಶೋಧ ಕಾರ್ಯಾಚರಣೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News