ಸಿಯರಾ ಲಿಯೋನ್ ಭೂಕುಸಿತ: 400 ಮೃತದೇಹಗಳು ಪತ್ತೆ

Update: 2017-08-16 14:37 GMT

ಫ್ರೀಟೌನ್ (ಸಿಯರಾ ಲಿಯೋನ್), ಆ. 16: ಸಿಯರಾ ಲಿಯೋನ್ ದೇಶದ ರಾಜಧಾನಿ ಫ್ರೀಟೌನ್‌ನ ಹೊರವಲಯದಲ್ಲಿ ಸಂಭವಿಸಿದ ಭೂಕುಸಿತದ ಅವಶೇಷಗಳಡಿಯಿಂದ ರಕ್ಷಣಾ ಕಾರ್ಯಕರ್ತರು ಸುಮಾರು 400 ಮೃತದೇಹಗಳನ್ನು ಹೊರದೆಗೆದಿದ್ದಾರೆ ಎಂದು ಮುಖ್ಯ ಕೊರೋನರ್ ಮಂಗಳವಾರ ಹೇಳಿದ್ದಾರೆ.

 ಅದೇ ವೇಳೆ, ಈ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಹಾಗೂ ಮೃತದೇಹಗಳನ್ನು ಇಡಲು ಶವಾಗಾರದಲ್ಲಿ ಸ್ಥಳಾಭಾವ ಎದುರಾಗಿದೆ.

 ರೀಜಂಟ್ ಪಟ್ಟಣ ಹಾಗೂ ಫ್ರೀಟೌನ್‌ನ ಸುತ್ತಮುತ್ತಲ ಪ್ರವಾಹಪೀಡಿತ ಸ್ಥಳಗಳ ಜನರು ತಕ್ಷಣ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಅಧ್ಯಕ್ಷ ಅರ್ನೆಸ್ಟ್ ಬೈ ಕೊರೊಮ ಒತ್ತಾಯಿಸಿದ್ದಾರೆ.

ರೀಜಂಟ್ ಪಟ್ಟಣದಲ್ಲಿ ಸೋಮವಾರ ಬೆಳಗ್ಗೆ ಪರ್ವತದ ಬದಿಯೊಂದು ಕುಸಿದಾಗ ಹತ್ತಾರು ಮನೆಗಳು ಧರಾಶಾಯಿಯಾಗಿವೆ. ಇದು ಆಫ್ರಿಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ಪ್ರಾಕೃತಿಕ ವಿಕೋಪಗಳ ಪೈಕಿ ಒಂದಾಗಿದೆ.

‘‘ಶೋಧ ಕಾರ್ಯಾಚರಣೆ ಮುಂದುವರಿಯುತ್ತಿದ್ದು, ನಾವು 400 ಮೃತದೇಹಗಳನ್ನು ಮೇಲೆತ್ತಿದ್ದೇವೆ. ಆದರೆ, 500ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಸಾಧ್ಯತೆಯಿದೆ’’ ಎಂದು ಚೀಫ್ ಕೊರೋನರ್ ಸೆನೆಹ್ ಡುಂಬುಯ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News