ಫುಟ್ಬಾಲ್ ಅಂಗಣದಲ್ಲಿ ಮಿಂಚು ಹರಿಸಲು ಬೋಲ್ಟ್ ಸಜ್ಜು

Update: 2017-08-16 14:44 GMT

ಮ್ಯಾಡ್ರಿಡ್, ಆ.16: ವಿಶ್ವದ ಶರವೇಗದ ಸರದಾರ ಉಸೇನ್ ಬೋಲ್ಟ್ ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅಥ್ಲೆಟಿಕ್ಸ್‌ನಿಂದ ನಿವೃತ್ತಿಯಾಗಿದ್ದರು. ಅಥ್ಲೀಟ್ ಆಗಿ ಅಮೋಘ ಸಾಧನೆ ಮಾಡಿದ್ದ ಬೋಲ್ಟ್ ಇದೀಗ ಫುಟ್ಬಾಲ್‌ನತ್ತ ತನ್ನ ಗಮನ ಹರಿಸಿದ್ದು, ಅಲ್ಲಿಯೂ ಸಾಧನೆ ಮಾಡಲು ಎದುರು ನೋಡುತ್ತಿದ್ದಾರೆ.

ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಜರ್ಸಿಯನ್ನು ಧರಿಸಲಿರುವ ಬೋಲ್ಟ್ ಸೆ.2 ರಂದು ಓಲ್ಡ್ ಟ್ರಾಫೋರ್ಡ್‌ನಲ್ಲಿ ನಡೆಯಲಿರುವ ಬಾರ್ಸಿಲೋನ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಫುಟ್ಬಾಲ್‌ಗೆ ಪಾದಾರ್ಪಣೆಗೈಯ್ಯಲಿದ್ದಾರೆ.

ಬೋಲ್ಟ್ ಓಲ್ಡ್ ಟ್ರಾಫೋರ್ಡ್‌ನಲ್ಲಿ ಫುಟ್ಬಾಲ್ ದಂತಕತೆಗಳಾದ ರಿಯಾನ್ ಗಿಬ್ಸ್ ಹಾಗೂ ಪಾಲ್ ಸ್ಕೋಲ್ಸ್‌ರೊಂದಿಗೆ ಆಡಲಿದ್ದಾರೆ.

ಶನಿವಾರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 4-100ಮೀ. ರಿಲೇಯಲ್ಲಿ ಕೊನೆಯ ಬಾರಿ ಭಾಗವಹಿಸಿದ ಬೋಲ್ಟ್ ಗಾಯಗೊಂಡು ಕಣ್ಣೀರಿನ ವಿದಾಯ ಹೇಳಿದ್ದರು.

‘‘ನನಗೆ ಫುಟ್ಬಾಲ್ ಆಡುವ ಬಯಕೆಯಿದೆ ಎಂದು ಯಾವಾಗಲೂ ಹೇಳುತ್ತಾ ಬಂದಿದ್ದೇನೆ. ಇದೀಗ ನನ್ನ ದೀರ್ಘಕಾಲದ ಕನಸು ಈಡೇರುತ್ತಿದೆ. ಉತ್ತಮವಾಗಿ ಆಡಲು ಪ್ರಯತ್ನಿಸುವೆನು’’ ಎಂದು ‘ದಿ ಸನ್’ಗೆ ಬೋಲ್ಟ್ ತಿಳಿಸಿದ್ದಾರೆ.

ಇತ್ತೀಚೆಗೆ ಲಂಡನ್‌ನಲ್ಲಿ ಕೊನೆಗೊಂಡ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ವೃತ್ತಿಜೀವನದಲ್ಲಿ ಮೊದಲ ಬಾರಿ ಬೋಲ್ಟ್ ಕಠಿಣ ಸಮಯ ಎದುರಿಸಿದ್ದರು. ವೈಯಕ್ತಿಕ 100 ಮೀ. ಓಟದಲ್ಲಿ ಕಂಚಿಗೆ ತೃಪ್ತಿಪಟ್ಟಿದ್ದ ಬೋಲ್ಟ್ ತನ್ನ ವೃತ್ತಿಜೀವನದ ವಿದಾಯದ ಓಟದಲ್ಲಿ ಗಾಯಗೊಂಡು ಭಾರೀ ನಿರಾಸೆಗೊಳಿಸಿದ್ದರು.

ಬೋಲ್ಟ್ 100 ಹಾಗೂ 200 ಮೀ. ಓಟದಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಬೋಲ್ಟ್ ಜಾಗತಿಕ ಮಟ್ಟದ ಟೂರ್ನಿಯಲ್ಲಿ ಒಟ್ಟು 14 ಪದಕಗಳನ್ನು ಜಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News