ಕೊಲಂಬಿಯದ 50 ವರ್ಷಗಳ ಬಂಡಾಯ ಮುಕ್ತಾಯ: ಅಧ್ಯಕ್ಷರಿಂದ ಘೋಷಣೆ

Update: 2017-08-16 16:16 GMT

ಬೊಗೊಟ (ಕೊಲಂಬಿಯ), ಆ. 16: ಎಫ್‌ಎಆರ್‌ಸಿ ಬಂಡುಕೋರರೊಂದಿಗಿನ 50 ವರ್ಷಗಳ ಸಂಘರ್ಷ ಮಂಗಳವಾರ ‘ನಿಜವಾಗಿಯೂ ಮುಕ್ತಾಯಗೊಂಡಿದೆ’ ಎಂದು ಕೊಲಂಬಿಯದ ಅಧ್ಯಕ್ಷ ಜುವಾನ್ ಮ್ಯಾನುಯಲ್ ಸಂಟೋಸ್ ಘೋಷಿಸಿದ್ದಾರೆ.

ಇದೇ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳನ್ನೊಳಗೊಂಡ ಕೊನೆಯ ಟ್ರಕ್‌ಗಳು ಶಸ್ತ್ರಾಗಾರದತ್ತ ಪ್ರಯಾಣಿಸಿದವು.

‘‘ಬಂಡುಕೋರರು ಶಸ್ತ್ರಾಸ್ತ್ರಗಳನ್ನು ಒಪ್ಪಿಸಿದ್ದು ಸಂಘರ್ಷ ನಿಜವಾಗಿಯೂ ಮುಕ್ತಾಯಗೊಂಡಿದೆ ಹಾಗು ನಮ್ಮ ದೇಶದ ಬದುಕಿನಲ್ಲಿ ಹೊಸದೊಂದು ಅಧ್ಯಾಯ ಆರಂಭಗೊಂಡಿದೆ’’ ಎಂದು ಉತ್ತರದ ಗ್ವಾಜಿರದಲ್ಲಿರುವ ದುರ್ಗಮ ಪ್ರದೇಶ ಪೊಂಡೋರ್ಸ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಹೇಳಿದರು.

 ‘‘ನಾವು 198 ವರ್ಷಗಳಿಂದ ಗಣರಾಜ್ಯವಾಗಿ ಬೆಳೆದು ಬಂದಿದ್ದೇವೆ. ಈ ಅವಧಿಯಲಿ ಇಷ್ಟೊಂದು ಸುದೀರ್ಘ ಸಂಘರ್ಷವನ್ನು ನಾವು ಇನ್ನೆಂದೂ ಕಂಡಿಲ್ಲ. ಇಂದು ನಿಜವಾಗಿಯೂ ಆ ಸಂಘರ್ಷದ ಕೊನೆಯ ಉಸಿರಾಗಿದೆ’’ ಎಂದರು.

ಸೆಪ್ಟಂಬರ್ 1ರಂದು ತಾನು ರಾಜಕೀಯ ಪಕ್ಷವಾಗಿ ಅಧಿಕೃತವಾಗಿ ಪರಿವರ್ತನೆಗೊಳ್ಳುವುದಾಗಿ ಎಡಪಂಥೀಯ ಬಂಡುಕೋರ ಪಡೆ ಹೇಳಿದೆ.

ವಿಶ್ವಸಂಸ್ಥೆ ಮಧ್ಯಸ್ಥಿಕೆಯಲ್ಲಿ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಕಳೆದ ವರ್ಷ ಸಹಿ ಹಾಕಲಾಗಿತ್ತು.

1964ರಲ್ಲಿ ರೈತ ಬಂಡಾಯವೊಂದರ ಮೂಲಕ ಎಫ್‌ಎಆರ್‌ಸಿ ಜನ್ಮ ತಾಳಿತ್ತು. ಸುದೀರ್ಘ ಸಂಘರ್ಷದಲ್ಲಿ ಸುಮಾರು 2.5 ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಸುಮಾರು 60,000 ಮಂದಿ ನಾಪತ್ತೆಯಾಗಿದ್ದಾರೆ ಹಾಗೂ 70 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News