ರೈ ಮಾಲಕತ್ವದ ಬೆಸ್ಟ್ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡಲಿ: ಸಂಸದ ನಳಿನ್

Update: 2017-08-16 15:41 GMT

ಬಂಟ್ವಾಳ, ಆ. 16: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಬರುತ್ತಿದ್ದ ದೇವಸ್ಥಾನದ ಅನುದಾನ ಸ್ಥಗಿತಗೊಳಿಸುವ ಮೂಲಕ ಬಡ ಮಕ್ಕಳ ಅನ್ನಕ್ಕೆ ಕೈ ಹಾಕಿರುವ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಶ್ರೀರಾಮ ವಿದ್ಯಾಕೇಂದ್ರದಂತೆ ತನ್ನ ಮಾಲಕತ್ವದ ಬೆಸ್ಟ್ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸವಾಲೆಸೆದಿದ್ದಾರೆ.

ಬುಧವಾರ ಬಿ.ಸಿ.ರೋಡ್ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಹಳದಿ ಕಣ್ಣಿನಿಂದ ನೋಡಿ ಮಕ್ಕಳ ಅನ್ನಕ್ಕೆ ಕನ್ನ ಹಾಕಿರುವುದು ಖಂಡನೀಯವಾಗಿದೆ.

ಸಿಎಂ ಸಿದ್ದರಾಮಯ್ಯ, ಸಚಿವ ರಮಾನಾಥ ರೈ ತಮ್ಮ ಜೇಬಿನಿಂದ ಹಣವನ್ನು ನೀಡುವುದಲ್ಲ. ದೇವಸ್ಥಾನದ ಹುಂಡಿಗೆ ಭಕ್ತರು ಸಮರ್ಪಿಸಿದ ಹಣದಿಂದ ನೀಡಲಾಗುತ್ತಿದೆ. ದೇವಸ್ಥಾನದ ಹಣ ಪೋಲಾಗಬಾರೆದಂಬ ಉದ್ದೇಶದಿಂದ ದಿ. ಡಾ. ವಿ.ಎಸ್.ಆಚಾರ್ಯರು ಮುಜರಾಯಿ ಸಚಿವರಾಗಿದ್ದಾಗ ದೇವಸ್ಥಾನದ ಹುಂಡಿ ಹಣ ಶಿಕ್ಷಣ, ಆರೋಗ್ಯ, ಸಾಮಾಜಿಕ ಕಾರ್ಯಗಳಿಗೆ ವಿನಿಯೋಗವಾಗಬೇಕೆಂದು ಕಾನೂನು ರೂಪಿಸಲಾಗಿತ್ತು ಎಂದರು.

ಕನಿಷ್ಠ ಅವರ ಕಳ್ಳಿಗೆ ಗ್ರಾಮದ ಮಕ್ಕಳಿಗಾದರೂ ಉಚಿತ ಶಿಕ್ಷಣದ ವ್ಯವಸ್ಥೆ ಕಲ್ಲಿಸಬೇಕು. ಅಗ ಅವರಿಗೆ ಸಮಸ್ಯೆಯಾದಲ್ಲಿ ಬಿಜೆಪಿ ಅವರ ನೆರವಿಗೂ ಸಿದ್ದವಿದೆ. ಕಲ್ಲಡ್ಕ ಪ್ರಭಾಕರ ಭಟ್ ಜೊತೆ ಹೋರಾಡುವುದಿದ್ದರೆ ವೈಚಾರಿಕವಾಗಿ ಮಾಡಿ. ಭಕ್ತರು ಹುಂಡಿಗೆ ಹಾಕಿದ ಹಣವನ್ನು ಶಾಲೆಗೆ ಒದಗಿಸುವುದನ್ನು ನಿಲ್ಲಿಸುವ ಮೂಲಕ ನೀಚತನ, ಸಣ್ಣತನ ತೋರಿಸಬೇಡಿ ಎಂದು ಕಟೀಲ್ ಹೇಳಿದ್ದಾರೆ.

ರಮಾನಾಥ ರೈಗಳು ನಡೆಸುವ ಶಾಲೆಯಲ್ಲಿ ಯೋಗ, ನೈತಿಕತೆಯ ಪಾಠ ಸಹಿತ, ತನ್ನದೇ ಕಳ್ಳಿಗೆ ಗ್ರಾಮದ ಅಹಿಂದ ವರ್ಗದ ಜನರಿಗೆ ಸಂಪೂರ್ಣ ಉಚಿತವಾದ ಶಿಕ್ಷಣವನ್ನು ಒದಗಿಸಿ ಪ್ರೋತ್ಸಾಹಿಸಲಿ. ಅವರಿಗೆ ಕೊಲ್ಲೂರು ದೇವಸ್ಥಾನ ವತಿಯಿಂದ ಅನುದಾನ ಒದಗಿಸಿದರೆ, ನಾವು ಅದನ್ನು ಬೆಂಬಲಿಸುತ್ತೇವೆ. ರೈಗಳು ಪೈಪೋಟಿ ನೀಡುವುದಿದ್ದರೆ, ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡಬೇಕು ಎಂದು ಸವಾಲೆಸೆದರು.

ಶರತ್ ಮಡಿವಾಳ ಹತ್ಯೆ ಹಿಂದಿನ ಶಕ್ತಿಗಳ ಪಾತ್ರಗಳ ಕುರಿತು ತನಿಖೆಯಾಗಲಿ. ನಿರಪರಾಧಿಗಳನ್ನು ಪೊಲೀಸರು ಬಂಧಿಸುವುದಿಲ್ಲ ಎಂಬ ವಿಶ್ವಾಸವಿದೆ. ಹತ್ಯೆ ಆರೋಪಿಗಳನ್ನು ಬಂಧಿಸಿದ ಜಿಲ್ಲಾ ಪೊಲೀಸರಿಗೆ ಅಭಿನಂದಿಸುತ್ತೇನೆ ಎಂದ ನಳಿನ್, ಹತ್ಯೆಗೆ ಸಂಬಂಧಿತ ಎಲ್ಲ ಮಾಹಿತಿಗಳೂ ಹೊರಬರಲಿ ಎಂದು ಆಶಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಸುಲೋಚನಾ ಜಿ.ಕೆ. ಭಟ್, ಜಿ.ಆನಂದ, ದಿನೇಶ್ ಅಮ್ಟೂರು, ಮೋನಪ್ಪ ದೇವಸ್ಯ, ದಿನೇಶ್ ಭಂಡಾರಿ, ಚೆನ್ನಪ್ಪ ಕೋಟ್ಯಾನ್, ದೇವದಾಸ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News