​ಶರತ್ ಹತ್ಯೆ ಪ್ರಕರಣ: ಮತ್ತೆ ಮೂವರ ಬಂಧನ

Update: 2017-08-16 15:51 GMT

ಮಂಗಳೂರು, ಆ.16: ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಮತ್ತೆ ಮೂವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ತಿಳಿಸಿದ್ದಾರೆ.

ಬೆಳ್ತಂಗಡಿ ಸಮೀಪದ ಪಾರಂಕಿಯ ರಿಯಾಝ್, ನೆಲ್ಯಾಡಿಯ ಸಾದಿಕ್, ಚಾಮರಾಜನಗರದ ಕಲೀಂ ಯಾನೆ ಕಲೀಮುಲ್ಲಾ ಬಂಧಿತ ಆರೋಪಿಗಳು.

ಪಿಎಫ್‌ಐ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಇವರು ಕೊಲೆ ಆರೋಪಿಗಳಿಗೆ ಬೆಂಬಲ ಮತ್ತು ಆಶ್ರಯ ನೀಡಿದ್ದಾರೆ. ಆರೋಪಿಗಳನ್ನು ಪ್ರತ್ಯೇಕ ಕಡೆಗಳಿಂದ ಬಂಧಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಸುದ್ದಿಗೋಷ್ಠಿ ನಡೆಸಿ ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ಅಬ್ದುಲ್ ಶಾಫಿ ಅಲಿಯಾಸ್ ಶಾಫಿ (36) ಮತ್ತು ಚಾಮರಾಜನಗರ ಗಾಳಿಪುರ ಗ್ರಾಮದ ಖಲೀಲುಲ್ಲಾ (30) ಎಂಬವರನ್ನು ಬಂಧಿಸಿದ ಬಗ್ಗೆ ಮಾಹಿತಿ ನೀಡಿದ್ದರು.

ಈ ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿದ ಪೊಲೀಸರು ಅವರು ನೀಡಿದ ಮಾಹಿತಿಯ ಮೇರೆಗೆ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ಮಾಹಿತಿ ಕಲೆ ಹಾಕಲು ಮತ್ತೆ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೃತ್ಯದಲ್ಲಿ ನೇರವಾಗಿ ಪಾಲ್ಗೊಂಡ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ತಿಳಿಸಿದ್ದಾರೆ.

ಜುಲೈ 4ರಂದು ರಾತ್ರಿ ಸುಮಾರು 9:30ಕ್ಕೆ ಬಿ.ಸಿ.ರೋಡ್‌ನ ಉದಯ ಲಾಂಡ್ರಿ ಅಂಗಡಿಯಲ್ಲಿ ಶರತ್ ಮಡಿವಾಳರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಹಾಕಿದ್ದರು. ರಕ್ತದ ಮಡವಿನಲ್ಲಿ ಬಿದ್ದಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜು. 7ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News