​ಆರ್‌ಝಡ್‌ನಲ್ಲಿ ಸಾಂಪ್ರದಾಯಿಕ ಮರಳುಗಾರಿಕೆಗೆ ಅರ್ಜಿ ಆಹ್ವಾನ

Update: 2017-08-16 15:55 GMT

ಉಡುಪಿ, ಆ.16: ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ (ಸಿಆರ್‌ಝಡ್) ಮೀನುಗಾರಿಕಾ ದೋಣಿಗಳ ಸಂಚಾರಕ್ಕೆ ಅಡಚಣೆಯಾ ಗಿರುವ ಒಟ್ಟು 28 ಮರಳು ದಿಬ್ಬಗಳನ್ನು (ಸ್ಯಾಂಡ್‌ಬಾರ್ಸ್‌) ಗುರುತಿಸಲಾಗಿದ್ದು, ಈ ಮರಳು ದಿಬ್ಬಗಳಲ್ಲಿ ಮಾನವಶ್ರಮದಿಂದ ಮರಳನ್ನು ತೆಗೆಯಲು ಪರವಾನಿಗೆ ಪಡೆಯಲಿಚ್ಛಿಸುವ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈಗಾಗಲೇ ಗುರುತಿಸಲಾಗಿರುವ 28 ಮರಳುದಿಬ್ಬಗಳ ಮರಳು ತೆಗೆಯಲು ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ ಅನುಮೋದನೆ ನೀಡಿದ್ದು, ಈ ಮರಳು ದಿಬ್ಬಗಳ ವಿವರಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಪಡೆದು ಪರಿಶೀಲಿಸಲು ಅವಕಾಶವಿದೆ.

ಅರ್ಜಿದಾರರಿಗೆ ಮಾನದಂಡಗಳು:  ಅರ್ಜಿದಾರರು ಕರಾವಳಿ ನಿಯಂತ್ರಣ ವಲಯದಲ್ಲಿ ಪಾರಂಪರಿಕವಾಗಿ ಮರಳನ್ನು ತೆಗೆಯುವ ಕಸುಬಿನಲ್ಲಿ ತೊಡಗಿಸಿ ಕೊಂಡವರಾಗಿದ್ದು, ಸೂಕ್ತ ಪೂರಕ ದಾಖಲೆ ಒದಗಿಸಬೇಕು. ಅರ್ಜಿಯೊಂದಿಗೆ ಪೂರಕ ದಾಖಲೆ, ಆಧಾರ್, ಚುನಾವಣಾ ಗುರುತಿನ ಚೀಟಿ ಹಾಗೂ ಪಡಿತರ ಚೀಟಿ ಪ್ರತಿಗಳನ್ನು ಲಗತ್ತಿಸಿರಬೇಕು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಅರ್ಹ ಅರ್ಜಿದಾರರಿಗೆ ಜಿಲ್ಲೆಯೊಳಗೆ ಅವರು ಇಚ್ಚಿಸುವ ಮರಳು ದಿಬ್ಬವನ್ನು ನೀಡಲಾಗುವುದು. ಉಳಿದ ಅರ್ಜಿದಾರರು ಕನಿಷ್ಠ 10 ವರ್ಷ ವಾಸವಾಗಿರುವ ಗ್ರಾಪಂ ವ್ಯಾಪ್ತಿಯಲ್ಲಿರುವ ಮರಳು ದಿಬ್ಬಗಳನ್ನು ತೆರವುಗೊಳಿಸಲು ಅವಕಾಶ ನೀಡಲಾಗುವುದು.

ಅರ್ಜಿದಾರರು ಪಾರಂಪರಿಕವಾಗಿ ಮರಳನ್ನು ತೆಗೆಯಲು ಸ್ವಂತ ಹೆಸರಿನಲ್ಲಿ ಅಥವಾ ಕರಾರು/ಗೇಣಿ ಮೂಲಕ ಪಡೆದ ನೊಂದಾಯಿತ ದೋಣಿಗಳನ್ನು ಹೊಂದಿರಬೇಕು. ಅರ್ಜಿದಾರರು ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರಬಾರದು.

ಪರವಾನಿಗೆ ಪಡೆಯಲು ನಿಗದಿತ ಅರ್ಜಿ ನಮೂನೆಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಚೇರಿಯಿಂದ ಪಡೆದು, ಅರ್ಜಿಯನ್ನು ಭರ್ತಿಗೊಳಿಸಿ ಸ್ವಂತ ಸಹಿಯೊಂದಿಗೆ ಆ.27ರ ಸಂಜೆಯೊಳಗೆ ಸಲ್ಲಿಸಬೇಕು. ಅರ್ಜಿಯೊಂದಿಗೆ ಮರಳನ್ನು ತೆರವುಗೊಳಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ವಿಧಿಸಿರುವ ಎಲ್ಲಾ ಷರತ್ತುಗಳನ್ನು ಒಪ್ಪಿ ಪ್ರಮಾಣಿಕರಿಸಿದ ಬಗ್ಗೆ 100 ರೂ. ಸ್ಟಾಂಪ್‌ಪೇಪರ್ ನಲ್ಲಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಕರಾವಳಿ ನಿಯಂತ್ರಣ ವಲಯ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News