ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ: 133 ಪರವಾನಿಗೆ ನೀಡಲು ಸಮಿತಿ ನಿರ್ಧಾರ

Update: 2017-08-16 15:57 GMT

ಮಣಿಪಾಲ, ಆ.16: ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ವ್ಯಾಪ್ತಿಯಲ್ಲಿ ಒಟ್ಟು 28 ಮರಳು ದಿಬ್ಬಗಳನ್ನು ಗುರುತಿಸ ಲಾಗಿದ್ದು, ಇವುಗಳ ತೆರವಿಗೆ ಒಟ್ಟು 133 ಪರವಾನಿಗೆಯನ್ನು ನೀಡಲು ಕರಾವಳಿ ನಿಯಂತ್ರಣ ವಲಯ ಸಮಿತಿ ನಿರ್ಧರಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಈ ಮರಳುಗಾರಿಕೆಗೆ ಈವರೆಗೆ ಸಾಂಪ್ರದಾಯಿಕ ಮರಳುಗಾರಿಕೆ ನಡೆಸುತ್ತಿದ್ದು ಅರ್ಜಿ ಸಲ್ಲಿಸಿದವರಿಗೆ ಆದ್ಯತೆಯ ಮೇರೆಗೆ ಪರವಾನಿಗೆ ನೀಡಲಾಗುವುದು. ಇವರು ಕೇವಲ ಮಾನವ ಶ್ರಮದಿಂದ ಮರಳುಗಾರಿಕೆ ನಡೆಸುವುದು ಕಡ್ಡಾಯವಾಗಿದೆ. ಇಲ್ಲಿ ಯಾವುದೇ ರೀತಿಯ ಯಾಂತ್ರಿಕ ಮರಳುಗಾರಿಕೆಗೆ ಅವಕಾಶವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಇಲ್ಲಿ ತೆಗೆಯಲಾಗುವ ಸಂಪೂರ್ಣ ಮರಳನ್ನು ಜಿಲ್ಲೆಯೊಳಗೆ ಬಳಸ ಬೇಕಾಗುತ್ತದೆ. ಹೊರ ಜಿಲ್ಲೆಗಳಿಗೆ ಈ ಮರಳನ್ನು ಸಾಗಿಸದಂತೆ ತಡೆಯಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಜಿಲ್ಲೆಯ ಹೊರಗೆ ಮರಳು ಸಾಗಾಟ ತಡೆಯಲು ಪೊಲೀಸ್, ಅಬಕಾರಿ, ಅರಣ್ಯ ಇಲಾಖೆಗಳು, ಪಿಡಿಓ, ವಿಎ ಎಲ್ಲರಿಗೂ ಅಧಿಕಾರವನ್ನು ಕಲ್ಪಿಸಲಾಗುವುದು ಎಂದರು.

ಮರಳನ್ನು ಸಾಗಿಸಲು 407 ಹಾಗೂ ಟಿಪ್ಪರ್‌ಗಳಿಗೆ ಮಾತ್ರ ಅವಕಾಶವಿರು ತ್ತದೆ. ದೊಡ್ಡಗಾತ್ರದ ಲಾರಿಗಳನ್ನು ಬಳಸುವುದಕ್ಕೆ ನಿಷೇಧ ವಿದಿಸಲಾಗುವುದು. ಮರಳು ಸಾಗಾಟದಿಂದ ಊರಿನ ರಸ್ತೆ ಹಾಳಾಗದಂತೆ ತಡೆಯಲು ಈ ಕ್ರಮ. ಒಂದು ಲೋಡ್‌ನಲ್ಲಿ ಗರಿಷ್ಠ ಎಂಟು ಟನ್ ಮರಳನ್ನು ಮಾತ್ರ ಸಾಗಿಸಲು ಅವಕಾಶ ನೀಡಲಾಗುವುದು ಎಂದೂ ಅವರು ವಿವರಿಸಿದರು.

ಒಟ್ಟು 133 ಪರವಾನಿಗೆಗಳಲ್ಲಿ ಉಡುಪಿ ತಾಲೂಕಿನಲ್ಲಿ 110 ಹಾಗೂ ಕುಂದಾಪುರ ತಾಲೂಕಿನಲ್ಲಿ 23 ಪರವಾನಿಗೆಗಳು ಲಭ್ಯವಿದೆ. ಇವುಗಳಲ್ಲಿ ಉಡುಪಿಯಲ್ಲಿ 26, ಬ್ರಹ್ಮಾವರದಲ್ಲಿ 84, ಕುಂದಾಪುರ 18 ಹಾಗೂ ಬೈಂದೂರು ವ್ಯಾಪ್ತಿಯಲ್ಲಿ 8 ಪರವಾನಿಗೆಗಳನ್ನು ನೀಡಲಾಗುತ್ತದೆ.
ಆಯಾ ಪಂಚಾಯತ್ ವ್ಯಾಪ್ತಿಯಲ್ಲಿ ವಾಸ್ತವ್ಯ ಮಾಡುವವರಿಗೆ ಅದೇ ಗ್ರಾಪಂ ವ್ಯಾಪ್ತಿಯ ಪರವಾನಿಗೆ ಪಡೆಯಲು ಅವಕಾಶವಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮಾತ್ರ ಗ್ರಾಪಂ ಬಿಟ್ಟು ಹೊರಗೆ ಪರವಾನಿಗೆ ಪಡೆಯ ಬಹುದಾಗಿದೆ ಎಂದು ಪ್ರಮೋದ್ ತಿಳಿಸಿದರು.

ಈ ಕ್ರಮದಿಂದಾಗಿ ಜಿಲ್ಲೆಯ ಜನತೆಗೆ ಅತೀ ಕಡಿಮೆ ಬೆಲೆ ಮರಳು ಸಿಗಲಿದೆ. ಇಡೀ ದೇಶದಲ್ಲೇ ಅತೀ ಕಡಿಮೆ ದರಕ್ಕೆ ಮರಳು ಸಿಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಈ ತಿಂಗಳ ಕೊನೆಯೊಳಗೆ ಮರಳುಗಾರಿಕೆ ಪ್ರಾರಂಭ ಗೊಳ್ಳುವ ನಿರೀಕ್ಷೆ ಇದೆ ಎಂದರು.

ನಾನ್ ಸಿಆರ್‌ಝಡ್ ಪ್ರದೇಶದಲ್ಲಿ ಮರಳುಗಾರಿಕೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯ ಕ್ಯಾಬಿನೆಟ್ ಸಮಿತಿಯ ಸಬ್ ಸಮಿತಿಯ ಸಭೆ ಅಂತಿಮ ಸಭೆ ಇಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಇದರಲ್ಲಿ ತೆಗೆದುಕೊಳ್ಳುವ ನಿರ್ಧಾರದ ಆಧಾರದಲ್ಲಿ ಮುಂದಿನ ಕ್ರಮ ಜರಗಲಿದೆ ಎಂದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂನ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಕೋದಂಡರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News