ಅಶೋಕ್ ಪ್ಯಾರಡೈಸ್ ಅಪಾರ್ಟ್‌ಮೆಂಟ್‌ನಲ್ಲಿ ಮಹಿಳಾ ಸಂಘ ಉದ್ಘಾಟನೆ

Update: 2017-08-16 16:27 GMT

ಮಂಗಳೂರು, ಆ.16: ನಗರದ ಅಶೋಕನಗರ ಹೊಗೆಬೈಲ್‌ನ ಅಶೋಕ ಪ್ಯಾರಡೈಸ್ ಅಪಾರ್ಟ್‌ಮೆಂಟ್ ಓನರ್ಸ್‌ ಅಸೋಸಿಯೇಶನ್‌ನಲ್ಲಿರುವ ಮಹಿಳೆಯರು ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಬೆಳೆಯಲು ಸ್ಥಾಪಿಸಿದ ಮಹಿಳಾ ಸಂಘವನ್ನು ಮೇಯರ್ ಕವಿತಾ ಸನಿಲ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಅಪಾರ್ಟ್‌ಮೆಂಟ್‌ನಲ್ಲಿರುವ ಮಹಿಳೆಯರು ತಮ್ಮದೇ ಆದ ಸಂಘಟನೆಯನ್ನು ಕಟ್ಟಿಕೊಳ್ಳುವುದು ಉತ್ತಮವಾದ ಕಾರ್ಯ. ಇಂತಹ ಸಂಘಟನೆಗಳ ಮೂಲಕ ಮಹಿಳೆಯರು ಮತ್ತಷ್ಟು ಗಟ್ಟಿಯಾಗುತ್ತಾರೆ ಎಂದರು.

 ನೀರಿನ ಸಮಸ್ಯೆಗೆ ಪರಿಹಾರ: ಅಪಾರ್ಟ್‌ಮೆಂಟ್‌ನ ನೀರಿನ ಸಮಸ್ಯೆಯ ಕುರಿತು ಮಾತನಾಡಿದ ಮೇಯರ್ ಕವಿತಾ ಸನಿಲ್, ಬಿಲ್ಡರ್‌ಗಳು ಇಂತಹ ಅಪಾರ್ಟ್‌ಮೆಂಟ್ ಕಟ್ಟುವಾಗ ಸರಿಯಾದ ಪಾರ್ಕಿಂಗ್ ವ್ಯವಸ್ಥೆ, ನೀರಿನ ಸವಲತ್ತು ಎಲ್ಲವನ್ನು ಮಾಡಿಕೊಟ್ಟ ಬಳಿಕ ಪ್ಲ್ಯಾಟ್‌ಗಳನ್ನು ಮಾರಾಟ ಮಾಡಬೇಕು. ಇಂತಹ ಅಪಾರ್ಟ್‌ಮೆಂಟ್‌ಗಳನ್ನು ಕಟ್ಟುವಾಗ ನೀರಿನ ಸವಲತ್ತು ಸರಿಯಾಗಿ ಇರಬೇಕು. ಆದರೆ ಇಲ್ಲಿನ ಸಮಸ್ಯೆಯನ್ನು ಆಲಿಸಿದಾಗ ಎರಡು ಕಡೆಯಿಂದಲೂ ತಪ್ಪು ಸಂಭವಿಸಿದೆ. ಒಂದು ಅಪಾರ್ಟ್‌ಮೆಂಟ್‌ಗಳಲ್ಲಿರುವ ಪ್ಲ್ಯಾಟ್‌ಗಳನ್ನು ಕೊಂಡುಕೊಳ್ಳುವ ಮೊದಲು ಪ್ಲ್ಯಾಟ್ ಮಾಲಕರು ಕಂಪ್ಲೀಶನ್ ಸರ್ಟಿಪಿಕೇಟ್ ಪಡೆದುಕೊಂಡಿರಬೇಕು. ಜತೆಗೆ ಸರಿಯಾದ ಸವಲತ್ತು ಇಲ್ಲದೆ ಇದ್ದಾಗ ಇಂತಹ ಸರ್ಟಿಪಿಕೇಟ್ ನೀಡುವ ಕಾರ್ಯ ಮಾಡಿದ ಮನಪಾ ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿದೆ ಎಂದರು.

ಅಶೋಕ ನಗರದ ಕಾರ್ಪೊರೇಟರ್ ರಾಧಾಕೃಷ್ಣ ಮಾತನಾಡಿ, ಬಿಲ್ಡರ್‌ಗಳು ಸರಿಯಾದ ನೀರಿನ ಸವಲತ್ತು ನೀಡದ ಕಾರಣ ನಿವಾಸಿಗಳು ಸಂತ್ರಸ್ತರಾಗಿದ್ದಾರೆ. ಈ ಕುರಿತು ಅದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಬೆಸೆಂಟ್ ಮಹಿಳಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ. ನಳಿನಿ ಪುತ್ತೂರಾಯ ಅಸೋಸಿಯೇಶನ್ ಪರವಾಗಿ ಕುಡಿಯುವ ನೀರಿನ ಬೇಡಿಕೆಯ ಮನವಿ ಪತ್ರ ಮೇಯರ್‌ಗೆ ಸಲ್ಲಿಸಿದರು. ಅಸೋಸಿಯೇಶನ್‌ನ ಉಪಾಧ್ಯಕ್ಷ ಯು.ಕೆ. ಕುಮಾರನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಶಿವಶಂಕರ ಸರ್ಪಮೂಲೆ, ಮಹಿಳಾ ಘಟಕದ ಸಂಚಾಲಕಿ ವಿದ್ಯಾ ಶೇಣವ, ಆಡಳಿತಾಧಿಕಾರಿ ರಾಜೇಶ್ ಕುಮಾರ್‌ಅಮ್ಟಾಡಿ, ಜತೆ ಕಾರ್ಯದರ್ಶಿ ವಿನೋದ್ ಭಟ್ ಕೆ, ಕೋಶಾಧಿಕಾರಿ ಪ್ರವೀಣ್ ಶೆಟ್ಟಿ, ಜತೆ ಕೋಶಾಧಿಕಾರಿ ರಾಜೇಶ್ ಕುಮಾರ್ ನಾಯ್ಕಿ, ಮಹಿಳಾ ಘಟಕದ ರೈನಾ ರೋಡ್ರಿಗಸ್, ಜಯಶ್ರೀ ಉದಯಕುಮಾರ್, ರಾಜೇಶ್ವರಿ ಎಸ್.ರಾವ್, ಶಾಂತಲಾ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಅಪಾರ್ಟ್‌ಮೆಂಟ್‌ನ ಹಿರಿಯರಾದ ಸೀತಾ ಡಿ. ಕರ್ಕೆರಾ ಹಾಗೂ ವರದರಾಜ ಶೆಣೈ ಅತಿಥಿಗಳಿಗೆ ಸ್ಮರಣಿಕೆ ನೀಡಿದರು. ಎಲಿಜಬೆತ್ ಪಿಂಟೊ ಮತ್ತು ಮಿಶೆಲ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು. ಲೀಲಾ ರಾಮ್ ಮೊಗೇರ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅಪಾರ್ಟ್‌ಮೆಂಟ್‌ನ ಮಹಿಳೆಯರು ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News