ಜಪಾನ್, ಅಮೆರಿಕ ಸೈನಿಕರಿಂದ ನೈಜ ಫಿರಂಗಿ ದಾಳಿ ತಾಲೀಮು

Update: 2017-08-16 16:34 GMT

ಎನಿವ (ಜಪಾನ್), ಆ. 16: ಉತ್ತರ ಕೊರಿಯದ ಕ್ಷಿಪಣಿ ಬೆದರಿಕೆಗಳ ಹಿನ್ನೆಲೆಯಲ್ಲಿ ವಲಯದಲ್ಲಿ ಉಂಟಾಗಿರುವ ಭಾರಿ ಉದ್ವಿಗ್ನತೆಯ ನಡುವೆ, ಜಪಾನ್ ಮತ್ತು ಅಮೆರಿಕಗಳ ಸುಮಾರು 300 ಸೈನಿಕರು ಬುಧವಾರ ಉತ್ತರ ಜಪಾನ್‌ನಲ್ಲಿ ಪೂರ್ಣ ಪ್ರಮಾಣದ ಫಿರಂಗಿ ದಾಳಿ ತಾಲೀಮು ನಡೆಸಿದ್ದಾರೆ.

ಪೆಸಿಫಿಕ್ ಸಾಗರದಲ್ಲಿ ಅಮೆರಿಕಕ್ಕೆ ಸೇರಿದ ದ್ವೀಪ ಗ್ವಾಮ್ ಮೇಲೆ ಕ್ಷಿಪಣಿಗಳನ್ನು ಹಾರಿಸುವುದಾಗಿ ಉತ್ತರ ಕೊರಿಯ ಬೆದರಿಕೆ ಹಾಕಿದ ಬಳಿಕ, ಅಮೆರಿಕ ಮತ್ತು ಉತ್ತರ ಕೊರಿಯಗಳ ನಡುವೆ ಮಾತಿನ ಸಮರ ನಡೆದಿತ್ತು. ಅದರ ಬೆನ್ನಿಗೇ, 19 ದಿನಗಳ ಯುದ್ಧಾಭ್ಯಾಸದ ಭಾಗವಾಗಿ ಈ ತಾಲೀಮು ನಡೆದಿದೆ.

 ಉತ್ತರದ ದ್ವೀಪ ಹೊಕ್ಕಾಯ್ಡಾದಲ್ಲಿ ಜಪಾನ್‌ನ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್ ಸೈನಿಕರು ಮತ್ತು ಅಮೆರಿಕದ ಮರೀನ್‌ಗಳು ಶಸ್ತ್ರ ಸಜ್ಜಿತ ಯುದ್ಧ ವಾಹನಗಳನ್ನು ಬಳಸಿ ನೈಜ ತಾಲೀಮು ನಡೆಸಿದರು.

ಎರಡು ದೇಶಗಳ ಪಡೆಗಳು ಆಗಸ್ಟ್ 10ರಿಂದ ‘ನಾರ್ದರ್ನ್ ವೈಪರ್ 2017’ ಯುದ್ಧಾಭ್ಯಾಸದಲ್ಲಿ ತೊಡಗಿವೆ. ಇದರಲ್ಲಿ ಜಪಾನ್‌ನ 1,300 ಸೈನಿಕರು ಮತ್ತು ಅಮೆರಿಕದ 2,000 ಮರೀನ್‌ಗಳು ಭಾಗವಹಿಸುತ್ತಿದ್ದಾರೆ.

ಆದಾಗ್ಯೂ, ಈ ತಾಲೀಮಿಗೂ ಉತ್ತರ ಕೊರಿಯ ಪರ್ಯಾಯ ದ್ವೀಪದಲ್ಲಿ ಉಂಟಾಗಿರುವ ಉದ್ವಿಗ್ನತೆಗೂ ಯಾವುದೇ ಸಂಬಂಧವಿಲ್ಲ ಎಂದು ಜಪಾನ್ ರಕ್ಷಣಾ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News