ಒಬಾಮ ಟ್ವೀಟ್‌ಗೆ ಟ್ವಿಟರ್ ಇತಿಹಾಸದ ಅತ್ಯಧಿಕ ಮೆಚ್ಚುಗೆ

Update: 2017-08-16 17:05 GMT

ಶಾರ್ಲಟ್ಸ್‌ವಿಲ್ (ಅಮೆರಿಕ), ಆ. 16: ಅಮೆರಿಕದ ವರ್ಜೀನಿಯ ರಾಜ್ಯದ ಶಾರ್ಲಟ್ಸ್‌ವಿಲ್‌ನಲ್ಲಿ ಕಳೆದ ವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮಾಡಿರುವ ಟ್ವೀಟ್, ಟ್ವಿಟರ್‌ನಲ್ಲಿ ಸಾರ್ವಕಾಲಿಕ ಅತ್ಯಧಿಕ ಮೆಚ್ಚುಗೆ ಪಡೆದ ಟ್ವೀಟ್ ಆಗಿದೆ.

ಪ್ರತಿಮೆಯೊಂದನ್ನು ತೆರವುಗೊಳಿಸುವ ವಿಚಾರದಲ್ಲಿ ಬಿಳಿಯ ಶ್ರೇಷ್ಠತಾವಾದಿಗಳು ಮತ್ತು ಎಡಪಂಥೀಯರ ನಡುವೆ ಇಲ್ಲಿ ನಡೆದ ಘರ್ಷಣೆಯಲ್ಲಿ ಮೂವರು ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ.

‘‘ಒಬ್ಬ ವ್ಯಕ್ತಿಯ ಚರ್ಮದ ಬಣ್ಣ ಅಥವಾ ಆತನ ಹಿನ್ನೆಲೆ ಅಥವಾ ಆತನ ಧರ್ಮದ ಕಾರಣಕ್ಕೆ ಆತನನ್ನು ದ್ವೇಷಿಸುತ್ತಾ ಯಾರೂ ಹುಟ್ಟುವುದಿಲ್ಲ’’ ಎಂಬುದಾಗಿ ಶನಿವಾರ ರಾತ್ರಿ ಒಬಾಮ ಟ್ವೀಟ್ ಮಾಡಿದ್ದರು.

ನೆಲ್ಸನ್ ಮಂಡೇಲಾರ ಆತ್ಮಚರಿತ್ರೆ ‘ಲಾಂಗ್ ವಾಕ್ ಟು ಫ್ರೀಡಂ’ನಲ್ಲಿರುವ ಈ ಮಾತುಗಳನ್ನು ಒಬಾಮ ಟ್ವೀಟ್ ಮಾಡಿದ್ದರು.

ಈ ಟ್ವೀಟ್‌ನ ಜೊತೆಗೆ ವಿವಿಧ ಜನಾಂಗಗಳ ಮಕ್ಕಳನ್ನೊಳಗೊಂಡ ಗುಂಪೊಂದರತ್ತ ತಾನು ಮುಗುಳುನಗುವ ಚಿತ್ರವನ್ನೂ ಒಬಾಮ ಹಾಕಿದ್ದರು.

ಬುಧವಾರದ ವೇಳೆಗೆ ಈ ಟ್ವೀಟ್‌ಗೆ 29 ಲಕ್ಷ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಅದು ಟ್ವಿಟರ್ ಇತಿಹಾಸದ ಅತ್ಯಂತ ಹೆಚ್ಚು ಮೆಚ್ಚುಗೆ ಪಡೆದ ಟ್ವೀಟ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News