ಗ್ರಾ.ಪಂ. ಸದಸ್ಯರ ಪತ್ರಕ್ಕೆ ಪ್ರಧಾನಿ ಸ್ಪಂಧನೆ: ಸೇತುವೆ, ರಸ್ತೆ ಅಭಿವೃದ್ಧಿಗೆ ಸೂಚನೆ
ಪುತ್ತೂರು, ಆ. 16: ಸೇತುವೆ ಹಾಗೂ ರಸ್ತೆಯನ್ನು ಅಭಿವೃದ್ಧಿಗೊಳಿಸುವಂತೆ ಪ್ರಧಾನಿಗೆ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಬರೆದಿರುವ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಕಾರ್ಯಾಲಯವು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಇಲಾಖೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.
ಬಳಿಕ ಸಂಬಂಧಪಟ್ಟ ಇಂಜಿನಿಯರ್ ಅವರು ಸ್ಥಳಕ್ಕೆ ಭೇಟಿ ನೀಡಿ ಅಂದಾಜು ಪಟ್ಟಿಯನ್ನೂ ಸಿದ್ಧಪಡಿಸಿದ್ದಾರೆ. ಸುಳ್ಯ ತಾಲೂಕು ವ್ಯಾಪ್ತಿಯ ಐವರ್ನಾಡು ಗ್ರಾಮದ ಚಳ್ಳತ್ತಡ್ಕ ಸೇತುವೆ ನಿರ್ಮಿಸುವಂತೆ ಹಾಗೂ ಇಲ್ಲಿನ ಐವರ್ನಾಡು-ಮಿತ್ತಮೂಲೆ-ದೇವರಕಾನ ಮೊಗಪ್ಪೆ ರಸ್ತೆಯನ್ನು ಆಭಿವೃದ್ಧಿ ಪಡಿಸುವಂತೆ ಐವರ್ನಾಡು ಗ್ರಾಮ ಪಂಚಾಯತ್ ಸದಸ್ಯ ನವೀನ್ ಕುಮಾರ್ ಸಾರಕರೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.
ಚಳ್ಳತ್ತಡಿ ಎಂಬಲ್ಲಿ ಸೇತುವೆ ನಿರ್ಮಾಣವಾಗಬೇಕೆನ್ನುವುದು ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆಯಾಗಿದೆ. ಇಲ್ಲಿನ ಜನರು ಪೇಟೆ, ತಾಲೂಕು ಕೇಂದ್ರ ಸಂಪರ್ಕಿಸಲು ಸುತ್ತುಬಳಸಿ ಹೋಗುತ್ತಿದ್ದಾರೆ. ಮಳೆಗಾಲದಲ್ಲಿ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಲು ಸಂಕಷ್ಟಪಡುತ್ತಿದ್ದಾರೆ. ಹೀಗಾಗಿ ಸೇತುವೆ ನಿರ್ಮಾಣ ಮಾಡಿ ಇಲ್ಲಿನ ಬೇಡಿಕೆ ಈಡೇರಿಸುವಂತೆ ಪತ್ರದಲ್ಲಿ ಒತ್ತಾಯಿಸಲಾಗಿತ್ತು. ಐವರ್ನಾಡು-ಮಿತ್ತಮೂಲೆ-ದೇವರಕಾನ-ಕುಳ್ಳಂಪಾಡಿ ಮೊಗಪ್ಪೆ ರಸ್ತೆ ದುಸ್ಥಿತಿಯ ಕುರಿತು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.
ಈ ಸಮಸ್ಯೆಯ ಕುರಿತು ಹಿಂದೆಯೊಮ್ಮೆ ನವೀನ್ ಕುಮಾಋ ಅವರು ಪ್ರಧಾನಿಗೆ ಪತ್ರ ಬರೆದಿದ್ದರು. ಆದರೆ ಈ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ನವೀನ್ ಮತ್ತೊಮ್ಮೆ ಪತ್ರ ಬರೆದು ಆಗ್ರಹಿಸಿದ್ದರು. ಇದೀಗ ಪತ್ರಕ್ಕೆ ಉತ್ತರಿಸಿರುವ ಪ್ರಧಾನಿ ಕಾರ್ಯಾಲಯವು ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಇಲಾಖೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ. ಬಳಿಕ ಸಂಬಂಧಪಟ್ಟ ಇಂಜಿನಿಯರ್‌ರವರು ಸ್ಥಳಕ್ಕೆ ಭೇಟಿ ನೀಡಿ ಅಂದಾಜು ಪಟ್ಟಿ ಸಿದ್ಧಪಡಿಸಿದ್ದಾರೆ.
ತೀರಾ ಗ್ರಾಮೀಣ ಪ್ರದೇಶವಾಗಿರುವ ಕಾರಣ ಇಲ್ಲಿನ ಜನರು ರಸ್ತೆ, ಸೇತುವೆ ಇಲ್ಲದೇ ಕಷ್ಟಪಡುವಂತಾಗಿದೆ. ಸಮಸ್ಯೆ ಕುರಿತು ಈ ಹಿಂದೆಯೇ ಸಂಸದ, ಶಾಸಕರಿಗೆ ಮನವಿ ನೀಡಲಾಗಿತ್ತು. ಆದರೆ ಅನುದಾನದ ಕೊರತೆಯಿಂದಾಗಿ ಕಾಮಗಾರಿಗೆ ಚಾಲನೆ ದೊರಕಿರಲಿಲ್ಲ. ನಮ್ಮ ಬೇಡಿಕೆ ಈಡೇರಿದಲ್ಲಿ ಪುತ್ತೂರು ಸಂಪರ್ಕಿಸಲು ಹತ್ತಿರವಾಗಲಿದೆ. ಇದೀಗ ಪ್ರಧಾನಿ ಕಾರ್ಯಾಲಯದಿಂದ ಪ್ರತಿಕ್ರಿಯೆ ದೊರಕಿರುವ ಕಾರಣ ಸೇತುವೆ ಹಾಗೂ ರಸ್ತೆ ಕುರಿತಾದ ನಮ್ಮ ಕನಸು ನನಸಾಗುವ ನಂಬಿಕೆಯಿದೆ ಎಂದು ನವೀನ್ ಕುಮಾರ್ ಸಾರಕರೆ ತಿಳಿಸಿದ್ದಾರೆ.