ಆಲೂರು : ಅಭಿನಂದನಾ ಸಮಾರಂಭ

Update: 2017-08-17 11:05 GMT

ಆಲೂರು,ಆ.17 : ಸಮಾಜಕ್ಕಾಗಿ ಸಾರ್ವಜನಿಕ ಕ್ಷೇತ್ರಗಳಲ್ಲಿ ದುಡಿಯುವ ಮನಸ್ಸುಗಳು ನಮ್ಮ ಸುತ್ತ ಮುತ್ತ ಸಾಕಷ್ಟಿವೆ. ತಮ್ಮ ವೈಯಕ್ತಿಕ ಆಶೋತ್ತರಗಳನ್ನು ಬದಿಗಿಟ್ಟು ಇನ್ನೊಬ್ಬರ ಒಳಿತಿಗಾಗಿ ಶ್ರಮಿಸುಮ ಶ್ರಮಜೀವಿಗಳನ್ನು ಗುರುತಿಸಿ ಸತ್ಕರಿಸುವ ಕೆಲಸವಾಗಬೇಕಿದೆ ಎಂದು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.

ಅವರು ಆಲೂರಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಸಂಘಟಕ, ಸಮಾಜ ಸೇವಕರಾದ ಹೆಚ್.ಸಿ.ಶಾಂತಕೃಷ್ಣರವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ನಾತಕೋತ್ತರ ಪದವೀಧರರಾದ ಶಾಂತಕೃಷ್ಣರವರು   ಉಪನ್ಯಾಸಕರಾಗಿ, ಸಮಾಜಸೇವಕರಾಗಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ತಾಲ್ಲೂಕು ಒಕ್ಕಲಿಗರ ಸಂಘದ ಕೋಶಾಧ್ಯಕ್ಷರಾಗಿ, ಲಯನ್ಸ್ ಸಂಸ್ಥೆಯ ಕೋಶಾಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ಪಿ.ಎಲ್. ಡಿ ಬ್ಯಾಂಕಿನ ಅಧ್ಯಕ್ಷರಾಗಿ ಹೀಗೆ ಹಲವಾರು ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ತಾಲ್ಲೂಕಿನಲ್ಲಿ ನಿರಂತರವಾಗಿ ತಮ್ಮ ಸಂಘಟನಾ ಚತುರತೆಯಿಂದ ಮೌಲಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ಆಲೂರಿನಲ್ಲಿ ೨೦೦೬ ರಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೂ ನಮಗೆ ಬಲವಾಗಿ ಇದ್ದಾರೆ. ಇಡೀ ಭಾರತ ೭೦ ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿರುವ ಶುಭ ಸಂದರ್ಭದಲ್ಲಿ ಇಂತಹ ಸಾಧಕರನ್ನು ಗೌರವಿಸುತ್ತಿರುವುದು ಶ್ಲಾಘನೀಯವಾದುದು ಎಂದರು.

ಹೆಚ್.ಸಿ.ಶಾಂತಕೃಷ್ಣ ಅಭಿನಂದನೆ ಸ್ವೀಕರಿಸಿ ಮಾತನಾಡಿ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತು ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ರವರ ಅಧ್ಯಕ್ಷತೆಯಲ್ಲಿ  ನಿರಂತರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಸಾಹಿತ್ಯದ ಕೆಲಸವನ್ನು ಮಾಡುತ್ತಿದೆ. ಇವರ ಬರವಣಿಗೆಗಳಿಂದ ನಮ್ಮ ಆಲೂರು ತಾಲ್ಲೂಕು ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಇಂದಿನ ಸನ್ಮಾನ ನನ್ನ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸಿದೆ. ಸಾಧಕರಿಗೆ ಸಾಲಿನಲ್ಲಿ ನನ್ನನ್ನು ಗುರುತಿಸಿದ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಪರಿಷತ್ತು ಮಾಡುವ ಕಾರ್ಯಕ್ರಮಗಳಲ್ಲಿ ಸದಾ ಬಲವಾಗಿ ಇರುತ್ತೇನೆ ಎಂದರು.

ವೇದಿಕೆಯಲ್ಲಿ ಚು.ಸಾ.ಪ ಗೌರವಾಧ್ಯಕ್ಷ ಕೆ.ಕೆ.ಸಿದ್ದೇಗೌಡ, ಉಪಾಧ್ಯಕ್ಷ ಟಿ.ಕೆ.ನಾಗರಾಜ್ ಮಾತನಾಡಿದರು. ಕ.ಸಾ.ಪ ಕೋಶಾಧ್ಯಕ್ಷರಾದ ಆರ್.ಟಿ.ಗುರುಸ್ವಾಮಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಕೆ.ರಂಗಸ್ವಾಮಿ, ಗುಂಡಣ್ಣ, ದೃಶ್ಯ ಮಾಧ್ಯಮ ವರದಿಗಾರ ಟಿ.ಕೆ.ಕುಮಾರಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News