ಬಾಲಕಿ ಮೆಹೆಕ್‌ಳ ಚಿಕಿತ್ಸೆಗೆ 1.12ಲಕ್ಷ ರೂ. ಸಂಗ್ರಹ

Update: 2017-08-17 12:42 GMT

ಉಡುಪಿ, ಆ.17: ರಕ್ತದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಶಿವಮೊಗ್ಗದ ಆರ್.ಎಂ.ಎಲ್. ನಗರದ ನಿವಾಸಿ ಶಾಹಿನಾ ಎಂಬವರ ಪುತ್ರಿ ಮೆಹೆಕ್ (11) ಚಿಕಿತ್ಸೆಗೆ ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳು 1.12 ಲಕ್ಷ ರೂ. ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಎಂಜಿಎಂ ಕಾಲೇಜಿನ ವಿದ್ಯಾರ್ಥಿ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಘ್ನೇಶ್ ಭಟ್ ನೇತೃತ್ವದಲ್ಲಿ ಕಾಲೇಜಿನ ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಂದ ಆ.10ರಂದು ಒಂದೇ ದಿನ 1,00,600 ರೂ. ಮತ್ತು ನಂತರ ಕಾಲೇಜಿನ ಕಚೇರಿಯಲ್ಲಿ ಇರಿಸಿದ್ದ ಡಬ್ಬಿ ಮೂಲಕ 12 ಸಾವಿರ ರೂ. ಸಂಗ್ರಹಿಸಲಾಗಿದ್ದು, ಇಂದು ಆ ಹಣವನ್ನು ಕಾಲೇಜಿನಲ್ಲಿ ಶಾಹಿನಾ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೆಹೆಕ್‌ಳ ಕಾಯಿಲೆ ಗುಣಪಡಿಸಲು 10 ಲಕ್ಷ ರೂ. ಹಣದ ಅಗತ್ಯವಿದ್ದು, ಇದಕ್ಕಾಗಿ ಮೆಹೆಕ್ ತಾಯಿ ಶಾಹಿನ್ ದಾನಿಗಳ ಮೊರೆ ಹೋಗಿ ಹಣ ಸಂಗ್ರಹಿಸುತ್ತಿದ್ದರು. ಅಲ್ಲದೆ ಸಹೋದರಿಯ ಅನಾರೋಗ್ಯ ಕಾರಣಕ್ಕೆ 9ನೆ ತರಗತಿಯಲ್ಲಿ ಶೇ.93 ಅಂಕ ಪಡೆದಿದ್ದ ಸೆಹೆರ್(15) ಹಾಗೂ ಎರಡನೆ ತರಗತಿಯ ಸಹೋದರ ಸಲ್ಮಾನ್ (9) ತನ್ನ ವಿದ್ಯಾಭ್ಯಾಸವನ್ನೆ ಮೊಟಕುಗೊಳಿಸಿದ್ದರು.

ಈ ಹಿನ್ನೆಲೆಯಲ್ಲಿ ಉಡುಪಿಯ ಫಾಗ್ರನ್ಸ್ ಆಫ್ ಹ್ಯುಮನಿಟಿ ತಂಡವು ಬಾಲಕಿಯ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲು ಸಾರ್ವಜನಿಕರಲ್ಲಿ ಹಣ ಸಂಗ್ರಹಿ ಸುತ್ತಿದ್ದು, ಇದರಿಂದ ಪ್ರೇರಣೆಗೊಂಡು ಕಾಲೇಜಿನ ಪ್ರತಿ ತರಗತಿಗೆ ತೆರಳಿ ಮೆಹೆಕ್‌ಳ ಚಿಕಿತ್ಸೆಗೆ ನೆರವು ನೀಡುವಂತೆ ಮನವಿ ಮಾಡಲಾಯಿತು. ಅದರಂತೆ ಕಾಲೇಜಿನ ವಿದ್ಯಾರ್ಥಿಗಳು ಮೆಹೆಕ್ ಚಿಕಿತ್ಸೆಗೆ ಹಣ ನೀಡಿ ಸಹಾಯ ಮಾಡಿದರು ಎಂದು ವಿಘ್ನೇಶ್ ಭಟ್ ತಿಳಿಸಿದರು.

‘ಮೆಹೆಕ್ ಚಿಕಿತ್ಸೆಗೆ ವೈದ್ಯರು ಒಟ್ಟು 10 ಲಕ್ಷ ರೂ. ಅಗತ್ಯವಿದೆ ಎಂದು ಹೇಳಿದ್ದರು. ಈಗಾಗಲೇ ಎಂಟು ತಿಂಗಳ ಚಿಕಿತ್ಸೆಗೆ 6.5 ಲಕ್ಷ ರೂ. ವ್ಯಯ ಮಾಡ ಲಾಗಿದೆ. ದಾನಿಗಳ ನೆರವು ಹಾಗೂ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಇದೆಲ್ಲ ಸಾಧ್ಯವಾಗಿದೆ. ಅಲ್ಲದೆ ಮಗಳ ಚಿಕಿತ್ಸೆಗಾಗಿ ಸೊಸೈಟಿಯಿಂದ ಒಂದು ಲಕ್ಷ ರೂ. ಸಾಲ ಪಡೆದುಕೊಂಡಿದ್ದೇನೆ’ ಎಂದು ಮೆಹೆಕ್ ತಾಯಿ ಶಾಹಿನ್ ತಿಳಿಸಿದರು.

ಸದ್ಯ ನಾವು ಉಡುಪಿ ಆಶಾ ನಿಲಯದಲ್ಲಿ ಆಶ್ರಯ ಪಡೆದುಕೊಂಡಿದ್ದು, ಆರ್ಥಿಕ ತೊಂದರೆಯಿಂದ ಹಿರಿಯ ಮಗಳು ಸೆಹೆರ್‌ಳನ್ನು ಎಸೆಸೆಲ್ಸಿಗೆ ಸೇರ್ಪಡೆ ಮಾಡಿಲ್ಲ. ಪತಿ ತೀರಿ ಹೋಗಿ ಎಂಟು ವರ್ಷ ಆಗಿದೆ. ಅದರ ನಂತರ ಅವರು ಮಾಡುತ್ತಿದ್ದ ಮೊಟ್ಟೆ ವ್ಯಾಪಾರವನ್ನು ನಾನೇ ಸ್ವತಃ ಓಮ್ನಿ ಕಾರು ಚಲಾಯಿಸಿ ಕೊಂಡು ಮಾಡುತ್ತಿದ್ದೆ. ಆದರೆ ಮಗಳ ಅನಾರೋಗ್ಯದಿಂದ ಈಗ ಯಾವುದೇ ಕೆಲಸ ಮಾಡುತ್ತಿಲ್ಲ. ಶಿವಮೊಗ್ಗದಲ್ಲಿರುವ ಮನೆ ಬಾಡಿಗೆ ಕೂಡ ಪಾವತಿಸಿಲ್ಲ ಎಂದು ಅವರು ಹೇಳಿದರು.

ಹಣ ಹಸ್ತಾಂತರದ ವೇಳೆ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಕುಸುಮಾ ಕಾಮತ್, ಉಪನ್ಯಾಸಕ ಸುಚಿತ್ ಕೋಟ್ಯಾನ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಕರ ಪೈ, ಉಪಾಧ್ಯಕ್ಷ ಗ್ಲೇವೆನ್ ಲುವಿಸ್ ಉಪಸ್ಥಿತರಿದ್ದರು.

ಈ ಸಂದರ್ಭ  ಸಿಎ ವಿದ್ಯಾರ್ಥಿಗಳ ಸಂಘ ‘ರೈನ್‌ಬೋ’ ವತಿಯಿಂದ ಮೆಹೆಕ್ ಚಿಕಿತ್ಸೆ 15 ಸಾವಿರ ರೂ. ಹಣ ಹಸ್ತಾಂತರಿಸಲಾಯಿತು. ಸಂಘದ ಸ್ವಾತಿ ಕಾಮತ್, ರಮ್ಯ ಭಂಡಾರ್ಕರ್ ಹಾಜರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News