×
Ad

ದ.ಕ. ಜಿ.ಪಂ.ನಲ್ಲಿ ಬಗೆಹರಿಯದ ಸ್ಪಿಲ್ ಓವರ್‌ ಸಮಸ್ಯೆ!

Update: 2017-08-17 18:25 IST

ಮಂಗಳೂರು, ಆ.17: ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ (ಎನ್‌ಆರ್‌ಡಿಡಬ್ಲುಪಿ)ಯಡಿ ಲಭ್ಯವಿರುವ ಪ್ರಸಕ್ತ ಸಾಲಿನಲ್ಲಿ ಲಭ್ಯವಿರುವ ಅನುದಾನವನ್ನು ಸಂಪೂರ್ಣವಾಗಿ ಮುಂದುವರಿದ ಕಾಮಗಾರಿ(ಸ್ಪಿಲ್ ಓವರ್)ಗಳಿಗೆ ವಿನಿಯೋಗಿಸುವುದನ್ನು ವಿರೋಧಿಸಿ ಪಕ್ಷಭೇದ ಮರೆತು ಒಮ್ಮತವನ್ನು ಪ್ರದರ್ಶಿಸಿದ ಪ್ರಸಂಗ ದ.ಕ. ಜಿಲ್ಲಾ ಪಂಚಾಯತ್‌ನಲ್ಲಿಂದು ಘಟಿಸಿತು.

ನೇತ್ರಾವತಿ ಸಭಾಂಗಣದಲ್ಲಿಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ, ಈ ಕುರಿತು ಸುದೀರ್ಘ ಚರ್ಚೆಯ ಬಳಿಕ ಲಭ್ಯವಿರುವ ಅನುದಾನವನ್ನು 36 ಕ್ಷೇತ್ರಗಳಿಗೆ ಮುಂದುವರಿದ ಕಾಮಗಾರಿಯನ್ನು ಒಳಗೊಂಡಂತೆ ತಲಾ 47.73 ಲಕ್ಷ ರೂ.ನಂತೆ ಹೊಸ ಕಾಮಗಾರಿಗಳಿಗೆ ಕ್ರಿಯಾ ಯೋಜನೆಯನ್ನು ರೂಪಿಸಲು ನಿರ್ಣಯ ಕೈಗೊಳ್ಳಲಾಯಿತು.

ಎನ್‌ಆರ್‌ಡಿಡಬ್ಲುಪಿ ಯೋಜನೆಯಡಿ 2017-18ನೆ ಸಾಲಿಗೆ ಮುಂದುವರಿದ 359 ಕಾಮಗಾರಿಗಳಿದ್ದು, ಪೂರ್ಣಗೊಳಿಸಲು 1492.35 ಲಕ್ಷ ರೂ. ಅನುದಾನ ಅಗತ್ಯವಿದೆ. ಆದ್ದರಿಂದ 17-18ನೆ ಸಾಲಿನ ಯೋಜನೆಯಲ್ಲಿ ಕಾಮಗಾರಿಗಳಿಗೆ ಹಂಚಿಕೆಯಾದ ಅನುದಾನದಲ್ಲಿ ಮುಂದುವರಿದ ಕಾಮಗಾರಿಗಳಿಗೆ ಬೇಕಿರುವ ಹಣವನ್ನು ಕಳೆದು ಹೊಸ ಕಾಮಗಾರಿಗಳಿಗೆ 226.27 ಸಕ್ಷ ರೂ. ಲಭ್ಯವಿರುವುದಾಗಿ ಉಪ ಕಾರ್ಯದರ್ಶಿ ಎನ್.ಆರ್. ಉಮೇಶ್ ತಿಳಿಸಿದರು.

ಇದಕ್ಕೆ ಎಂ.ಎಸ್. ಮುಹಮ್ಮದ್, ತುಂಗಪ್ಪ ಬಂಗೇರ, ವಿನೋದ್ ಕುಮಾರ್ ಬೊಳ್ಳೂರು , ಹರೀಶ್ ಕಂಜಿಪಿಲಿ ಮೊದಲಾದವರು ಆಕ್ಷೇಪಿಸುತ್ತಾ, ಈ ರೀತಿ ಪ್ರಸಕ್ತ ಸಾಲಿನಲ್ಲಿ ದೊರಕಿದ ಅನುದಾವನ್ನು ಸಂಪೂರ್ಣವಾಗಿ ಮುಂದುವರಿ ಕಾಮಗಾರಿಗಳಿಗೆ ಬಳಸಿದರೆ, ಪ್ರಸಕ್ತ ಸಾಲಿನಲ್ಲಿ ಹೊಸ ಯೋಜನೆಗಳು ಮಾಡಲು ಅವಕಾಶವಾಗುವುದಿಲ್ಲ. ಇದರಿಂದ ಜನಪ್ರತಿನಿಧಿಗಳು ಜನರಿಗೆ ಅಭಿವೃದ್ದಿ ಕಾಮಗಾರಿಗಳ ಕುರಿತು ಉತ್ತರಿಸಲು ಸಾಧ್ಯವಾಗುದಿಲ್ಲ ಎಂದರು.

ಮಾತ್ರವಲ್ಲದೆ, ಲಭ್ಯವಿರುವ ಅನುದಾನವನ್ನು ಎಲ್ಲಾ ಸದಸ್ಯರಿಗೆ ತಲಾ 47.73 ಲಕ್ಷ ರೂ.ನಂತೆ ಹಂಚಿಕೆ ಮಾಡಿ, ಆ ಹಣವನ್ನು ಮುಂದುವರಿದ ಕಾಮಗಾರಿಗಳಿಗೆ ಬಳಸಿ ಹೊಸ ಯೋಜನೆಗಳಿಗೆ ವಿನಿಯೋಗಿಸುವ ವಿವೇಚನೆಯನ್ನು ಆಯಾ ಸದಸ್ಯರಿಗೆ ಒದಗಿಸಬೇಕು. ಈ ಬಗ್ಗೆ ಕೆಲ ಸಮಯದ ಹಿಂದೆ ನಡೆದ ಸಭೆಯಲ್ಲೂ ನಿರ್ಣಯವಾಗಿದೆ. ಇದೀಗ ಅದಕ್ಕೆ ಅವಕಾಶವಿಲ್ಲವೆಂದು ಹೇಳುವ ಮೂಲಕ ಸದಸ್ಯರನ್ನು ಕಡೆಗಣಿಸಲಾಗುತ್ತಿದೆ ಎಂದು ಸದಸ್ಯರೆಲ್ಲರೂ ಆಕ್ಷೇಪಿಸಿದರು. ಇದಕ್ಕೆ ಅಧ್ಯಕ್ಷೆ, ಉಪಾಧ್ಯಕ್ಷೆ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರೂ ದನಿಗೂಡಿಸಿದರು. ಸದಸ್ಯರ ನಿರ್ಣಯಕ್ಕೆ ಬೆಲೆ ಸಿಗದಿದ್ದಲ್ಲಿ ಸಾಮೂಹಿಕವಾಗಿ ಸಭೆಯನ್ನು ಬಹಿಷ್ಕರಿಸುವ ಎಚ್ಚರಿಕೆಯನ್ನೂ ನೀಡಲಾಯಿತು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಆರ್. ರವಿ ಮಾತನಾಡಿ, ಹಿಂದಿನ ಸಭೆಯಲ್ಲಿ ಆದ ನಿರ್ಣಯದ ಬಗ್ಗೆ ತನಗೆ ತಿಳಿದಿಲ್ಲ. ಆ ಸಭೆಗೆ ತನಗೆ ಆಹ್ವಾನವೂ ಇರಲಿಲ್ಲ. ಆದರೆ ತಾಂತ್ರಿಕ ಕಾರಣಗಳಿಂದಾಗಿ ಮುಂದುವರಿದ ಕಾಮಗಾರಿಗಳ ಹಣವನ್ನು ಬಾಕಿ ಇಟ್ಟು ಹೊಸ ಕಾಮಗಾರಿಗಳಿಗೆ ಅವಕಾಶ ನೀಡಿದ್ದಲ್ಲಿ ತೊಂದರೆ ಆಗಲಿದೆ. ಕೆಲವೊಂದು ಕ್ಷೇತ್ರಗಳಲ್ಲಿ ಮುಂದುವರಿದ ಕಾಮಗಾರಿಗಳ ಮೊತ್ತ 90 ಲಕ್ಷ ರೂ.ಗಳಿಗೂ ಅಧಿಕವಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹರೀಶ್ ಕುಮಾರ್ ಕಂಜಿಪಿಲಿ, ಈಗಾಗಲೇ ನಿರ್ಣಯಿಸಿದಂತೆ ಲಭ್ಯವಿರುವ ಅನುದಾನವನ್ನು ಹಂಚಿಕೆ ಮಾಡಿ, ಆ ಹಣದಲ್ಲಿ ಸದಸ್ಯರು ತಮ್ಮ ವಿವೇಚನೆಯಂತೆ ಮುಂದುವರಿದ ಕಾಮಗಾರಿಗಳಿಗೆ ಹಣವನ್ನು ಮೀಸಲಿರಿಸಿ, ಉಳಿದ ಹಣದಲ್ಲಿ ತಮ್ಮ ಕ್ಷೇತ್ರದಲ್ಲಿ ಹೊಸ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಲಿ. ಬಳಿಕ ಐದು ಕ್ಷೇತ್ರಗಳಲ್ಲಿ ಅಧಿಕ ಮೊತ್ತದಲ್ಲಿರುವ ಸ್ಪಿಲ್ ಓವರನ್ನು ಇತರ ಸದಸ್ಯರ ಸಹಕಾರದ ಮೂಲಕ ಸರಿದೂಗಿಸಿ, ಮತ್ತೂ ಬಾಕಿಯಾಗುವ ಸ್ಪಿಲ್ ಓವರ್ ಮೊತ್ತವನ್ನು ಮುಂದಿನ ಸಾಲಿನ ಅನುದಾನದಲ್ಲಿ ಸರಿದೂಗಿಸಲು ನಿರ್ಣಯಿಸಬೇಕು ಎಂದರು.

ಈ ಬಗ್ಗೆ ವಿಸ್ತೃತ ಚರ್ಚೆಯ ಬಳಿಕ ಉಪ ಕಾರ್ಯದರ್ಶಿ ನಿರ್ಣಯ ಮಂಡಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸರ್ವೋತ್ತಮ ಗೌಡ, ಶಾಹುಲ್ ಹಮೀದ್, ಆಶಾ ತಿಮ್ಮಪ್ಪ ಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News