×
Ad

ಪುತ್ತೂರು: ಪಿಎಫ್‌ಐ-ಎಸ್‌ಡಿಪಿಐ ನಿಷೇಧಿಸಲು ಬಜರಂಗದಳ ಆಗ್ರಹ

Update: 2017-08-17 19:10 IST

ಪುತ್ತೂರು, ಆ. 17: ಹಿಂದುತ್ವ ಸಂಘಟನೆಯ ಕಾರ್ಯಕರ್ತರ ಹತ್ಯೆಯ ಹಿಂದೆ ಇಸ್ಲಾಮಿಕ್ ಭಯೋತ್ಪಾದನೆಯ ಷಡ್ಯಂತ್ರ ಅಡಗಿದ್ದು, ಜಿಹಾದ್ ಕೃತ್ಯಕ್ಕಾಗಿ ಪಿಎಫ್‌ಐ, ಎಸ್‌ಡಿಪಿಐ ಮತ್ತು ಕೆಎಫ್‌ಡಿ ಸಂಘಟನೆಗಳು ಹಿಂದೂಗಳ ಹತ್ಯೆ ಮಾಡುತ್ತಿರುವುದು ಶರತ್ ಮಡಿವಾಳ ಕೊಲೆ ಪ್ರಕರಣದಿಂದ ಸ್ಪಷ್ಟವಾಗಿದೆ. ಈ ಸಂಘಟನೆಗಳನ್ನು ತಕ್ಷಣ ನಿಷೇಧ ಮಾಡುವಂತೆ ರಾಜ್ಯಪಾಲರಿಗೆ ಹಾಗೂ ಕೇಂದ್ರದ ಗೃಹ ಇಲಾಖೆಗೆ ಹಿಂದೂ ಸಂಘಟನೆಗಳ ವತಿಯಿಂದ ಇಂದು ಮನವಿ ಸಲ್ಲಿಸಲಾಗುತ್ತಿದ್ದು, ಸರ್ಕಾರ ಒಂದು ತಿಂಗಳೊಳಗೆ ಕ್ರಮಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಬಜರಂಗದಳ ದಕ್ಷಿಣ ಪ್ರಾಂತ ಗೋರಕ್ಷಕ್ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ ತಿಳಿಸಿದರು.

ಗುರುವಾರ ಪುತ್ತೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದ ರುದ್ರೇಶ್ ಕೊಲೆ ಪ್ರಕರಣದಿಂದ ಹಿಡಿದು 20 ಕ್ಕೂ ಅಧಿಕ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ, ಹುಣಸೂರಿನಲ್ಲಿ ನಡೆದ ಅಮಾಯಕ ಪುಟಾಣಿಗಳ ಹತ್ಯೆ ಪ್ರಕರಣಗಳು ಪಿಎಫ್‌ಐ, ಎಸ್‌ಡಿಪಿಐ ಮತ್ತು ಕೆಎಫ್‌ಡಿ ಸಂಘಟನೆಗಳು ಜಿಹಾದ್ ಕೃತ್ಯಕ್ಕಾಗಿ ನಡೆಸಿದ ಹತ್ಯೆಗಳಾಗಿದ್ದು, ಈ ಸಂಘಟನೆಗಳನ್ನು ತಕ್ಷಣ ನಿಷೇಧ ಮಾಡಬೇಕು. ಹತ್ಯೆಯ ಹಿಂದೆ ಶಾಮೀಲಾಗಿರುವ ಹಾಗೂ ಆರೋಪಿಗಳಿಗೆ ಬೆಂಬಲ ನೀಡಿರುವ ಈ ಭಾಗದ ಸಂಘಟನೆಯ ಕಾರ್ಯಕರ್ತರಾದ ನೈಜ ಆರೋಪಿಗಳನ್ನು ಪತ್ತೆಮಾಡಿ ಉಗ್ರ ಶಿಕ್ಷೆಗೊಳಪಡಿಸ ಬೇಕು ಎಂದು ಅವರು ಹೇಳಿದರು.

ಅಕ್ರಮ ಗೋ ಸಾಗಾಟ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದರೂ, ಪೊಲೀಸರು ಒಂದೇ ಒಂದು ಪ್ರಕರಣವನ್ನು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಿಲ್ಲ. ಸುಳ್ಯಪದವಿನಲ್ಲಿ ನಡೆದ ಅಕ್ರಮ ಗೋ ಸಾಗಾಟ ಪ್ರಕರಣವನ್ನು ತಡೆದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರ ಮೇಲೆ ಯಾವುದೇ ಮಾನದಂಡವಿಲ್ಲದೆ ಸಂಪ್ಯ ಠಾಣೆಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ. ಈ ಘಟನೆಯ ಬಗ್ಗೆ ಪರಾಮರ್ಶೆ ನಡೆಸಿ ಅಕ್ರಮ ಗೋಸಾಗಾಟ ತಡೆದ ಕಾರ್ಯ ಕರ್ತರನ್ನು ಆರೋಪದಿಂದ ಮುಕ್ತಗೊಳಿಸಬೇಕು. ಅಕ್ರಮ ಗೋಸಾಗಾಟ ಮಾಡಿದವರಿಗೆ ಶಿಕ್ಷೆ ವಿಧಿಸಬೇಕು. ಈ ವಿಚಾರದಲ್ಲಿ ನ್ಯಾಯ ಸಿಗದ್ದಿದ್ದರೆ ಸಂಘಟನೆಗಳನ್ನು ಸೇರಿಸಿಕೊಂಡು ಉಗ್ರ ಹೋರಾಟ ನಡೆಲಾಗುವುದು ಎಂದು ಹೇಳಿದರು.

ಪೊಲೀಸರು ದನಕಳ್ಳರನ್ನು ಪತ್ತೆ ಮಾಡಿ ಶಿಕ್ಷೆ ವಿಧಿಸುತ್ತಿದ್ದರೆ ಅಕ್ರಮ ಜಾನುವಾರು ಸಾಗಾಟಕ್ಕೆ ಕಡಿವಾಣ ಬೀಳುತ್ತಿತ್ತು ಎಂದ ಮುರಳೀಕೃಷ್ಣ ಹಸಂತಡ್ಕ ಅವರು, ಗೋಹತ್ಯೆ ನಿಷೇಧ ನಮ್ಮ ಸಂಕಲ್ಪ. ಎಷ್ಟೇ ಕೇಸುಗಳನ್ನು ಹಾಕಿದರೂ ನಾವು ಈ ವಿಚಾರದಲ್ಲಿ ಹಿಂದಕ್ಕೆ ಸರಿಯುವುದಿಲ್ಲ. ಅಕ್ರಮ ಗೋ ಸಾಗಾಟ ತಡೆಯುವವರನ್ನು ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ ಎಂದರು.

ಸುದ್ದಿಗೋಷ್ಟಿಯಲ್ಲಿ ಬಜರಂಗದಳ ಜಿಲ್ಲಾ ವಿದ್ಯಾರ್ಥಿ ಪ್ರಮುಖ್ ಶ್ರೀಧರ್ ತೆಂಕಿಲ ಮತ್ತು ವಿಶ್ವಹಿಂದೂ ಪರಿಷತ್ ಪುತ್ತೂರು ನಗರ ಕಾರ್ಯದರ್ಶಿ ರಂಜಿತ್ ಜೈನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News