ಪ್ರಿಯಕರ ಡೆಸ್ಮಂಡ್ ಕುಟಿನ್ಹೊರನ್ನು ವಿವಾಹವಾದ ಇರೋಮ್ ಶರ್ಮಿಳಾ
Update: 2017-08-17 19:21 IST
ಚೆನ್ನೈ, ಆ.17: ಮಾನವಹಕ್ಕು ಕಾರ್ಯಕರ್ತೆ ಇರೋಮ್ ಚಾನು ಶರ್ಮಿಳಾ ಹಾಗೂ ಅವರ ಪ್ರಿಯಕರ ಡೆಸ್ಮಂಡ್ ಕುಟಿನ್ಹೊ ವಿವಾಹ ಇಂದು ಕೊಡೈಕನಾಲ್‌ನಲ್ಲಿ ನೆರವೇರಿತು.
ಕೊಡೈಕನಾಲ್‌ನಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹಕ್ಕೆ ಸಂಬಂಧಿಸಿದ ಪ್ರಕ್ರಿಯೆ ಸರಳವಾಗಿ ನಡೆಯಿತು. ಬೆಳಿಗ್ಗೆ ಕಚೇರಿಗೆ ಆಗಮಿಸಿದ ಇಬ್ಬರೂ ನಿಯಮಾನುಷ್ಠಾನಗಳನ್ನು ಪೂರೈಸಿದ ಬಳಿಕ ಪರಸ್ಪರ ಹಾರ ಬದಲಾಯಿಸಿಕೊಂಡರು ಎಂದು ಕಚೇರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ. ವಿವಾಹದ ಕುರಿತು ಎರಡು ತಿಂಗಳ ನೋಟಿಸ್ ಅವಧಿಯಲ್ಲಿ ಕೆಲವು ರಾಜಕೀಯ ಪಕ್ಷಗಳು ಹಾಗೂ ವ್ಯಕ್ತಿಗಳಿಂದ ಶರ್ಮಿಳಾ ಮದುವೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು.
ಮಣಿಪುರ ಮೂಲದ ಶರ್ಮಿಳಾ, ಈಶಾನ್ಯ ರಾಜ್ಯಗಳಲ್ಲಿ ಸಶಸ್ತ್ರ ಪಡೆಗಳಿಗಿರುವ ವಿಶೇಷಾಧಿಕಾರವನ್ನು ವಿರೋಧಿಸಿ 16 ವರ್ಷ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಕಳೆದ ವರ್ಷ ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಬಳಿಕ ಕೊಡೈಕನಾಲ್‌ನಲ್ಲಿ ನೆಲೆಸಲು ನಿರ್ಧರಿಸಿದ್ದರು.