×
Ad

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ: ಐವನ್‌

Update: 2017-08-17 20:10 IST

ಮಂಗಳೂರು, ಆ. 17: ಸ್ವತಃ ಭ್ರಷ್ಟಾಚಾರದ ಕಳಂಕ ಹೊತ್ತಿರುವ ಬಿಜೆಪಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೆತಿಕತೆ ಇಲ್ಲ ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿಸೋಜಾ ಹೇಳಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಭೇಟಿ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ. ಆದರೆ, ಸ್ವತಃ ಕೇಂದ್ರ ಮತ್ತು ರಾಜ್ಯದ ಬಿಜೆಪಿ ನಾಯಕರೇ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವಾಗ ರಾಜ್ಯ ಕಾಂಗ್ರೆಸ್ ನಾಯಕರನ್ನು ಭ್ರಷ್ಟರು ಎಂದು ಆರೋಪಿಸುವ ನೈತಿಕತೆ ಬಿಜೆಪಿಗಿಲ್ಲ ಎಂದರು.

ಸಚಿವರಾದ ಡಿ.ಕೆ.ಶಿವಕುಮಾರ್, ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ‘ವಿಧಾನಸೌಧ ಚಲೋ’ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಕ್ಕೆ ಅರ್ಥವಿಲ್ಲ. ಐಟಿ ದಾಳಿ ಮಾಡಿದ ಮಾತ್ರಕ್ಕೆ ರಾಜೀನಾಮೆ ಕೇಳುವುದು ಸರಿಯಲ್ಲ. ಲೆಕ್ಕಪತ್ರ ಸರಿಯಾಗಿದೆಯೇ ಎಂಬುದರ ಪರಿಶೀಲಿಸಲು ಐಟಿ ದಾಳಿ ನಡೆದಿದೆ. ಐಟಿ ದಾಳಿ ನಡೆದು ಹಲವು ದಿನಗಳು ಕಳೆದ ಬಳಿಕ ಇದೀಗ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜಿಪಿಯರು‘ವಿಧಾನಸೌಧ ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲು ರಾಜ್ಯಕ್ಕೆ ಅಮಿತ್ ಶಾ ಅವರು ಬರಬೇಕಾಯಿತೇ ಎಂದು ಐವನ್ ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕರಿಗೆ ರಾಜ್ಯದ ಜನರ ಬಗ್ಗೆ ಕಾಳಜಿ ಇದ್ದರೆ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಲಿ. ಕಾವೇರಿ ವಿವಾದವನ್ನು ಬಗೆಹರಿಸಲು ಯತ್ನಿಸಲಿ. ರಾಜ್ಯ ಸರಕಾರ ಮನ್ನಾ ಮಾಡಿದಂತೆ ಕೇಂದ್ರ ಸರಕಾರವೂ ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡಲು ಕೇಂದ್ರದ ಮೇಲೆ ಒತ್ತಡ ಹೇರಲಿ. ಕರ್ನಾಟಕ ಬರಗಾಲದಿಂದ ತತ್ತರಿಸುವಾಗ ಕೇಂದ್ರ ಸರಕಾರ ಬರೀ 1,500 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಆದರೆ, ಮಹಾರಾಷ್ಟ್ರಕ್ಕೆ 8000 ಕೋಟಿ ರೂ. ಹಾಗೂ ಗುಜರಾತ್ ರಾಜ್ಯಕ್ಕೆ 6 ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡುವ ಮೂಲಕ ಕೇಂದ್ರ ಸರಕಾರ ತಾರತಮ್ಯ ಧೋರಣೆ ಅನುಸರಿಸಿದೆ ಎಂದು ಐವನ್ ಆಪಾದಿಸಿದರು.

ರಾಜ್ಯದ ವಿಪಕ್ಷ ಸ್ಥಾನದಲ್ಲಿರುವ ಬಿಜೆಪಿ ನಾಯಕರು ಗಾಢ ನಿದ್ದೆಯಲ್ಲಿದ್ದಾರೆ. ಪ್ರತಿಭಟನೆಗಳಿಗೆ ಯಾವುದೇ ವಿಷಯ ಸಿಗುತ್ತಿಲ್ಲ. ರಾಜ್ಯ ಸರಕಾರ ಕೈಗೊಂಡಿರುವ ಜನಪರ ಯೋಜನೆಗಳನ್ನು ಸ್ವಾಗತಿಸುವ ಬದಲು ಟೀಕೆ ಮಾಡುವುದು ಸರಿಯಲ್ಲ. ಇಂದಿರಾ ಕ್ಯಾಂಟೀನ್‌ನ್ನು ಟೀಕೆ ಮಾಡಿರುವ ರಾಜ್ಯ ಬಿಜೆಪಿ ನಾಯಕರಿಗೆ ಜನಪರ ಕಾಳಜಿ ಇದೆಯೇ ಎಂದವರು ಪ್ರಶ್ನಿಸಿದರು.

ಶೀಘ್ರದಲ್ಲೇ ಮಂಗಳೂರಿಗೆ ಇಂದಿರಾ ಕ್ಯಾಂಟೀನ್‌

ಬೆಂಗಳೂರು ಬಳಿಕ ಮಂಗಳೂರು ನಗರದಲ್ಲಿ ಇಂದಿರಾ ಕ್ಯಾಂಟಿನ್ ಆರಂಭಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ ಎಂದು ಐವನ್ ಹೇಳಿದರು.

ಮಂಗಳೂರಿನಲ್ಲಿ ಇಂದಿರಾ ಕ್ಯಾಂಟಿನ್ ಆರಂಭಿಸಬೇಕೆಂದು ಎರಡು ವರ್ಷಗಳ ಹಿಂದೆಯೇ ಮುಖ್ಯಮಂತ್ರಿ ಮುಂದೆ ಬೇಡಿಕೆ ಇಟ್ಟಿದ್ದೆ. ಇದಕ್ಕೆ ಸ್ಪಂದಿಸಿರುವ ಅವರು ಬೆಂಗಳೂರು ನಗರದ ಬಳಿಕ ಮಂಗಳೂರಿನಲ್ಲಿ ಇಂದಿರಾಯ ಕ್ಯಾಂಟೀನ್ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ.

ಮುಂದಿನ ಸೆಪ್ಟರ್ ಅಥವಾ ಅಕ್ಟೋಬರ್ ತಿಂಗಳೊಳಗೆ ಕ್ಯಾಂಟಿನ್ ಆರಂಭಗೊಳ್ಳುವ ವಿಶ್ವಾಸವಿದೆ. ಮಂಗಳೂರಿನಲ್ಲಿ ಸರಕಾರಿ ಆಸ್ಪತ್ರೆಯ ಎದುರೇ ಕ್ಯಾಂಟೀನ್ ಆರಂಭಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದು ಅವರು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News