ಶರತ್ ಮಡಿವಾಳ ಬದಲು 'ಪ್ರಶಾಂತ್ ಮಡಿವಾಳ': ಬ್ಯಾನರ್ ನಲ್ಲಿ ಬಿಜೆಪಿ ಎಡವಟ್ಟು!
ಉಡುಪಿ, ಆ.17: ಪಿಎಫ್‌ಐ ಸಂಘಟನೆಯನ್ನು ನಿಷೇಧಿಸುವಂತೆ ಮತ್ತು ಸಚಿವ ರಮಾನಾಥ ರೈ ರಾಜೀನಾಮೆ ನೀಡುವಂತೆ ಆಗ್ರಹಿಸಿ ಇಂದು ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ನಡೆಸಿದ ಧರಣಿಯಲ್ಲಿ ಬಳಸಲಾಗಿದ್ದ ಬ್ಯಾನರ್ ನಲ್ಲಿ ಎಡವಟ್ಟೊಂದು ಸಂಭವಿಸಿದೆ.
ಧರಣಿ ಸಂದರ್ಭ ಬಿಜೆಪಿ ಯುವ ಮೋರ್ಚಾದ ಬ್ಯಾನರ್ ನಲ್ಲಿ ಆರೆಸ್ಸೆಸ್ ಕಾರ್ಯಕರ್ತ 'ಶರತ್ ಮಡಿವಾಳ'ರ ಹೆಸರಿನ ಬದಲಾಗಿ 'ಪ್ರಶಾಂತ್ ಮಡಿವಾಳ' ಎಂಬುದಾಗಿ ಬರೆಯಲಾಗಿತ್ತು. ಕಾರ್ಯಕ್ರಮದ ಕೊನೆಯವರೆಗೆ ಬಿಜೆಪಿ ಮುಖಂಡರ ಗಮನಕ್ಕೆ ಬಾರದ ಈ ತಪ್ಪನ್ನು ಮಾಧ್ಯಮದವರು ತಿಳಿಸಿದರು. ಆಗ ಬಿಜೆಪಿ ಜಿಲ್ಲಾಧ್ಯಕ್ಷ ಸಹಿತ ಮುಖಂಡರಿಗೆ ತಮ್ಮ ತಪ್ಪಿನ ಅರಿವಾಗಿ ಬ್ಯಾನರನ್ನು ಮಡಚಿಟ್ಟರು.
ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಧರಣಿ: ಪಿಎಫ್‌ಐ ಸಂಘಟನೆಯನ್ನು ನಿಷೇಧಿಸುವಂತೆ ಮತ್ತು ಸಚಿವ ರಮಾನಾಥ ರೈ ರಾಜೀನಾಮೆ ನೀಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರ ಹತ್ಯೆ ಹಾಗೂ ಹಲ್ಲೆ ಪ್ರಕರಣದಲ್ಲಿ ಪಿಎಫ್‌ಐ ಸಂಘಟನೆ ನೇರವಾಗಿ ಭಾಗಿಯಾಗಿರುವುದು ಸಾಬೀತಾಗಿದೆ. ಆದ್ದರಿಂದ ಈ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಸಂಘಟನೆಯ ಬ್ಯಾಂಕ್ ಖಾತೆ, ಚರಾಸ್ಥಿ, ಸ್ಥಿರಾಸ್ತಿಯನ್ನು ಕೂಡಲೇ ಮುಟ್ಟುಗೋಲು ಹಾಕಬೇಕು. ಇಂತಹ ಸಂಘಟನೆಗಳಿಗೆ ಮತ್ತು ಕೋಮು ಹಿಂಸೆಗೆ ಕುಮ್ಮಕ್ಕು ನೀಡುವ ಸಚಿವ ರಮಾನಾಥ ರೈ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಒತ್ತಾಯಿಸಿದರು.
ಮನವಿಯನ್ನು ಅಪರ ಜಿಲ್ಲಾಧಿಕಾರಿ ಅನುರಾಧಾ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ.ರಘುಪತಿ ಭಟ್, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಶ್ರೀಶ ನಾಯಕ್, ಜಿಪಂ ಅಧ್ಯಕ್ಷ ದಿನಕರ ಬಾಬು, ಸದಸ್ಯೆ ಗೀತಾಂಜಲಿ ಸುವರ್ಣ, ಮುಖಂಡರಾದ ಯಶ್ಪಾಲ್ ಸುವರ್ಣ, ಕುಯಿಲಾಡಿ ಸುರೇಶ್ ನಾಯಕ್, ಸುಪ್ರಸಾದ್ ಶೆಟ್ಟಿ, ಗಿರೀಶ್ ಅಂಚನ್, ಪ್ರತಾಪ್‌ಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.