ಕಾವ್ಯಾ ಪ್ರಕರಣ: ಸಮಗ್ರ ತನಿಖೆಯಾಗಬೇಕು- ಬಿ.ಕೆ.ಹರಿಪ್ರಸಾದ್

Update: 2017-08-17 17:34 GMT

ಮಂಗಳೂರು, ಆ.17: ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಪೂಜಾರಿಯ ನಿಗೂಢ ಮರಣ ಪ್ರಕರಣದ ಸಮಗ್ರವಾಗಿ ತನಿಖೆಯಾಗಬೇಕು. ಪ್ರಕರಣದ ಹಿಂದಿರುವ ಸತ್ಯಾಸತ್ಯತೆ ಹೊರಬಂದು ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.

ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವ್ಯಾಳ ಹೆತ್ತವರು ಮಗಳನ್ನು ಕಳೆದುಕೊಂಡ ನೋವಿನಲ್ಲಿದ್ದು, ಅವರಿಗೆ ನ್ಯಾಯ ಸಿಗಬೇಕು. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಈ ಹಿಂದೆ 11 ಆತ್ಮಹತ್ಯೆ ಪ್ರಕರಣಗಳು ನಡೆದಿದ್ದು, ಇದೊಂದು ಪ್ರಕರಣ ಮಾತ್ರ ದೊಡ್ಡ ಸುದ್ದಿಯಾಗಿದೆ. ಈ ಆತ್ಮಹತ್ಯೆಗಳ ಹಿಂದಿರುವ ಸತ್ಯಾಸತ್ಯತೆ ಏನು ಎಂದು ಅರಿಯಬೇಕಿದೆ. ಇನ್ನು ಮುಂದಕ್ಕೆ ಇಂತಹ ಘಟನೆಗಳು ಎಲ್ಲೂ ನಡೆಯಬಾರದು ಎಂದು ಹೇಳಿದರು.

ರಾಜ್ಯದ ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿಯ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಕೆಲವೊಂದು ವರದಿಗಳನ್ನು ಕೇಳಿರುವುದು ಸೂಕ್ತ ನಿರ್ಧಾರ. ಹಾಗಾಗಿ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳು ಕಾನೂನಿನ ಚೌಕಟ್ಟಿನಲ್ಲಿ ಅದನ್ನು ಸರಿಪಡಿಸಿಕೊಳ್ಳುವುದು ಒಳ್ಳೆಯ ಬೆಳವಣಿಗೆ ಎಂದರು.

2 ಲಕ್ಷ ರೂ. ಪರಿಹಾರ: ಕಾವ್ಯಾಳ ಹೆತ್ತವರಿಗೆ ಕಾಂಗ್ರೆಸ್ ಪಕ್ಷದ ಹಿತೈಷಿಗಳಿಂದ ಸಂಗ್ರಹಿಸಿದ 2 ಲಕ್ಷ ರೂ. ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.

ಯಾರು ಮಾಡಿದರೂ ತಪ್ಪೇ: ಎಂಡೋಮೆಂಟ್ ಕಾಯ್ದೆ ಪ್ರಕಾರ ದೇವಾಲಯಗಳಿಂದ ಶಾಲೆಗಳಿಗೆ ಊಟದ ವ್ಯವಸ್ಥೆ ಮಾಡುವಂತಿಲ್ಲ ಎಂದು ಬಿ.ಕೆ. ಹರಿಪ್ರಸಾದ್‌ರ ಹೇಳಿಕೆಗೆ ಸಂಬಂಧಿಸಿದಂತೆ ಪತ್ರಕರ್ತರು 2004ರಲ್ಲಿ ಕಾಂಗ್ರೆಸ್ ಸರಕಾರ ಇರುವಾಗ ಅನುದಾನ ಕೊಟ್ಟಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ತಪ್ಪುಯಾರು ಮಾಡಿದರೂ ತಪ್ಪೇ’ ಎಂದರು.

ಸಂಘಟನೆ ನಿಷೇಧಗೊಳ್ಳಲಿ: ಅವಿಭಜಿತ ದ.ಕ.ಜಿಲ್ಲೆಯು ಶಾಂತಿ, ಸೌಹಾರ್ದದ ನೆಲೆಬೀಡಾಗಿದೆ. ಇಲ್ಲಿ ಆಗಾಗ ಕೋಮುಸಂಘರ್ಷಗಳು ನಡೆಯುತ್ತಿರುವುದು ದುರದೃಷ್ಟಕರ. ಹೀಗೆ ಸಮಾಜ ಬಾಹಿರ, ದುಷ್ಕೃತ್ಯದಲ್ಲಿ ತೊಡಗುವ ಎಲ್ಲ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂದು ಹರಿಪ್ರಸಾದ್ ಹೇಳಿದರು.

ಭಿಕ್ಷಾಟನೆಯಲ್ಲ ಮತಯಾಚನೆ
ಕಲ್ಲಡ್ಕ ಶಾಲೆಗೆ ಅನುದಾನ ಹಿಂತೆಗೆತ ವಿಷಯದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ರಾಜಕೀಯ ಮಾಡುತ್ತಿದ್ದಾರೆ. ಅವರು ಭಿಕ್ಷಾಟನೆ ಮಾಡುತ್ತಿಲ್ಲ. ಈ ನೆಪದಲ್ಲಿ ಮತ ಯಾಚನೆ ಮಾಡುತ್ತಿದ್ದಾರೆ ಎಂದು ಹರಿಪ್ರಸಾದ್ ಟೀಕಿಸಿದರು.

ಯುಪಿಎ ಸರಕಾರದ ಆಡಳಿತಾವಧಿಯಲ್ಲಿ 4 ಸಾವಿರ ಕೋ.ರೂ. ವೆಚ್ಚದಲ್ಲಿ ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಜಾರಿಗೆ ತರಲಾಗಿತ್ತು. ಕಲ್ಲಡ್ಕದ ಶಾಲೆಗಳಿಗೆ ಸರಕಾರದ ಸೌಲಭ್ಯ ಪಡೆಯಲು ಅವಕಾಶವಿದೆ. ದೇವಾಲಯದಿಂದ ಊಟದ ವ್ಯವಸ್ಥೆ ನಿಲ್ಲಿಸಿರುವುದರಿಂದ ಮಕ್ಕಳ ಹೊಟ್ಟೆಯ ಮೇಲೆ ಹೊಡೆದಂತಾಗಿಲ್ಲ. ಬಿಜೆಪಿ ದಮನಕಾರಿ ನೀತಿ ಅನುಸರಿಸುತ್ತಿದೆ ಎಂದು ಹರಿಪ್ರಸಾದ್ ನುಡಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮೇಯರ್ ಕವಿತಾ ಸನಿಲ್, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ, ರಾಧಾಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News