ಬೀದಿಬದಿ ವ್ಯಾಪಾರಸ್ಥರ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ

Update: 2017-08-17 17:37 GMT

ಮಂಗಳೂರು, ಆ. 17: ಬೀದಿಬದಿ ವ್ಯಾಪಾರಸ್ಥರ ಮೇಲಿನ ನಿರಂತರ ದಾಳಿಯನ್ನು ಖಂಡಿಸಿ ಹಾಗೂ ಪರ್ಯಾಯ ವ್ಯವಸ್ಥೆಗೆ ಒತ್ತಾಯಿಸಿ ಗುರುವಾರ ಬೀದಿಬದಿ ವ್ಯಾಪಾರಸ್ಥರು ಸಿಐಟಿಯು ನೇತೃತ್ವದಲ್ಲಿ ಪಾಲಿಕೆ ಕಚೇರಿಯೆದುರು ಪ್ರತಿಭಟನಾ ಪ್ರದರ್ಶನ ನಡೆಸಿದರು.

400 ಮಿಕ್ಕಿದ ಬೀದಿಬದಿ ವ್ಯಾಪಾರಸ್ಥರು ಮನಪಾಕ್ಕೆ ಧಿಕ್ಕಾರ ಕೂಗಿದರಲ್ಲದೆ, ಪರ್ಯಾಯ ವ್ಯವಸ್ಥೆ ಆಗಬೇಕೆಂದು ಒತ್ತಾಯಿಸಿದರು. ಬಳಿಕ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ದ.ಕ. ಜಿಲ್ಲಾ ಬಿದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಅವರು, ಮಂಗಳೂರು ಮಹಾನಗರ ಪಾಲಿಕೆ ನಿರಂತರವಾಗಿ ದಾಳಿ ನಡೆಸುವ ಮೂಲಕ ಬೀದಿಬದಿ ವ್ಯಾಪಾರಸ್ಥರನ್ನು ಬೀದಿಪಾಲು ಮಾಡಲು ಹೊರಟಿದೆ. ಬೀದಿಬದಿ ವ್ಯಾಪಾರಸ್ಥರ ಮೇಲೆ ದಾಳಿ ನಡೆಸಲು ಭಾರೀ ಉತ್ಸುಕತೆ ತೋರಿಸುವ ಮೇಯರ್ ಹಾಗೂ ಮನಪಾ ಅಧಿಕಾರಿಗಳಿಗೆ ನಗರದಲ್ಲಿ ನಡೆಯುವ ಅಕ್ರಮ ದಂಧೆಗಳು, ರಸ್ತೆ ಮಧ್ಯದಲ್ಲೇ ತಲೆ ಎತ್ತುತ್ತಿರುವ ಅಕ್ರಮ ಕಟ್ಟಡಗಳು ಯಾಕೆ ಕಾಣುತ್ತಿಲ್ಲ? ಪರ್ಯಾಯ ವ್ಯವಸ್ಥೆಯ ಹೆಸರಿನಲ್ಲಿ ವೆಂಡಿಂಗ್ ಝೋನ್ ರಚಿಸಿದ್ದರೂ ಅಲ್ಲಿ ಹಲವಾರು ಮೂಲಭೂತ ಸಮಸ್ಯೆಗಳಿದ್ದು ಅದನ್ನು ಪರಿಹರಿಸಲು ಮನಪಾ ಮುತುವರ್ಜಿ ವಹಿಸಿಲ್ಲ. ಎರಡನೇ ಹಂತದ ಗುರುತು ಚೀಟಿ ತಯಾರಾಗಿದ್ದರೂ ಅದನ್ನು ನೀಡಲು ಮೀನ ಮೇಷ ಎಣಿಸುತ್ತಿದೆ. ಒಟ್ಟಿನಲ್ಲಿ ಮನಪಾ ಆಡಳಿತ ವ್ಯವಸ್ಥೆಯಲ್ಲಿಯೇ ದೋಷವಿದ್ದು ಎಲ್ಲಾ ಸಮಸ್ಯೆಗಳಿಗೆ ಬೀದಿಬದಿ ವ್ಯಾಪಾರಸ್ಥರೇ ನೇರ ಕಾರಣ ಎಂಬಂತೆ ಬಿಂಬಿಸುತ್ತಿರುವುದು ತೀರಾ ಖಂಡನೀಯ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಮುಹಮ್ಮದ್ ಮುಸ್ತಫಾ, ಬೀದಿಬದಿ ವ್ಯಾಪಾರಸ್ಥರು ಸಂಘಟಿತ ಹೋರಾಟ ನಡೆಸಿದರ ಪರಿಣಾಮವಾಗಿ ಮಸೂದೆ ಜಾರಿಗೊಂಡರೂ ಮಂಗಳೂರು ಮಹಾನಗರ ಪಾಲಿಕೆಗೆ ಮಾತ್ರ ಯಾವುದೇ ಆಸಕ್ತಿಯಿಲ್ಲ. ಬೀದಿಬದಿ ವ್ಯಾಪಾರಸ್ಥರನ್ನೇ ಎತ್ತಂಗಡಿ ಮಾಡಲು ಮನಪಾ ಪಿತೂರಿ ನಡೆಸುತ್ತಿದೆ. ಸದ್ಯಕ್ಕೆ ನಡೆಸುತ್ತಿರುವ ದಾಳಿಯನ್ನು ನಿಲ್ಲಿಸಬೇಕು. ಪರ್ಯಾಯ ವ್ಯವಸ್ಥೆಗೆ ಅಗತ್ಯ ಕ್ರಮಗಳನ್ನು ವಹಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀಕ್ಷ್ಣ ರೀತಿಯ ಹೋರಾಟಗಳನ್ನು ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.

ಬಳಿಕ ಸಂಘದ ಉನ್ನತ ಮಟ್ಟದ ನಿಯೋಗವೊಂದು ಮನಪಾ ಆಯುಕ್ತರನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಿ ಚರ್ಚಿಸಿತು.ಹೋರಾದ ನೇತೃತ್ವವನ್ನು ಸಂಘದ ಜಿಲ್ಲಾ ಮುಖಂಡರಾದ ಸಂತೋಷ್ ಆರ್.ಎಸ್., ಹರೀಶ್ ಪೂಜಾರಿ, ಮುಹಮ್ಮದ್ ಆಸಿಫ್, ನೌಶಾದ್, ಅತಾವುಲ್ಲಾ, ಸಿಯಾಬುದ್ದೀನ್, ಅಣ್ಣಯ್ಯ ಕುಲಾಲ್, ಶ್ರೀಧರ್, ಹಿತೇಶ್ ಪೂಜಾರಿ, ಮೇರಿ ಡಿ’ಸೋಜಾ, ಮೇಬಲ್ ಡಿ’ಸೋಜಾ, ಝಾಕಿರ್ ಹುಸೈನ್, ಗಜಾನನ, ಮುಝಫ್ಫರ್ ಮುಂತಾದವರು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News