ಮುಷ್ಕರ ಕೈಬಿಟ್ಟ ಆ್ಯಂಟನಿ ವೇಸ್ಟ್ ಕಂಪನಿಯ ಹೊರಗುತ್ತಿಗೆ ಕಾರ್ಮಿಕರು

Update: 2017-08-17 17:47 GMT

ಮಂಗಳೂರು, ಆ. 17: ವೇತನ ನೀಡುವಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಬುಧವಾರದಿಂದ ಅನಿರ್ದಿಷ್ಠಾವಧಿ ಮುಷ್ಕರ ಆರಂಭಿಸಿದ್ದ ಮಂಗಳೂರು ಪಾಲಿಕೆಯ ತ್ಯಾಜ್ಯ ಸಂಗ್ರಹ ನಡೆಸುತ್ತಿರುವ ಆ್ಯಂಟನಿ ವೇಸ್ಟ್ ಕಂಪೆನಿಯ ಹೊರಗುತ್ತಿಗೆ ಪೌರ ಕಾರ್ಮಿಕು ಇಂದು ಮುಷ್ಕರ ಕೈಬಿಟ್ಟಿದ್ದಾರೆ.

ಮೇಯರ್ ಕವಿತಾ ಸನಿಲ್‌ರವರ ಸೂಚನೆಯ ಹಿನ್ನೆಲೆಯಲ್ಲಿ ಹೊರಗುತ್ತಿಗೆ ಪೌರ ಕಾರ್ಮಿಕರು ಮುಷ್ಕರ ಕೈ ಬಿಟ್ಟು ನಗರದ ಹಲವೆಡೆ ಕಸ ವಿಲೇವಾರಿಯನ್ನು ನಡೆಸಿದ್ದಾರೆ.

ಕೂಳೂರು ಬಳಿ ಇರುವ ಆ್ಯಂಟನಿ ವೇಸ್ಟ್ ಸಂಸ್ಥೆಯ ಯಾರ್ಡ್‌ನಲ್ಲಿ ಎಲ್ಲ ಹೊರಗುತ್ತಿಗೆ ಪೌರ ಕಾರ್ಮಿಕರು ಜಮಾಯಿಸಿ, ಬುಧವಾರ ಪ್ರತಿಭಟನೆ ನಡೆಸಿದ್ದರು. ಕಸ ಸಾಗಾಟದ ಎಲ್ಲ ವಾಹನಗಳನ್ನು ಯಾರ್ಡ್‌ನಲ್ಲಿ ನಿಲ್ಲಿಸಿ, ಯಾರ್ಡ್‌ನಲ್ಲಿದ್ದ ಸುಮಾರು 650ಕ್ಕೂ ಅಧಿಕ ಕಾರ್ಮಿಕರು ಕೆಲಸ ನಿರ್ವಹಿಸದೆ ಮನೆಗೆ ಹಿಂತಿರುಗಿದ್ದರು. ಪರಿಣಾಮವಾಗಿ ಬುಧವಾರ ಮಂಗಳೂರಿನಾದ್ಯಂತ ಕಸ ಸಂಗ್ರಹ ಆಗಿರಲಿಲ್ಲ. ನಗರದಲ್ಲಿ ಹೆಚ್ಚಿನ ಮನೆಯ ಆವರಣ ಗೋಡೆ, ಗೇಟುಗಳಲ್ಲಿ ಇಟ್ಟ ಕಸದ ಕಟ್ಟುಗಳು ಹಾಗೆಯೇ ಉಳಿದಿದ್ದವು. ಅಲ್ಲಲ್ಲಿ ರಸ್ತೆ ಬದಿಯಲ್ಲಿ, ಅಂಗಡಿಗಳ ಎದುರು ಕಸ ರಾಶಿ ಬಿದ್ದಿತ್ತು. ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗವೇಣಿ, ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ ಮುಂತಾದವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಕಾರ್ಮಿಕರ ಸವುಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಿದ್ದರು.

ಪ್ರತಿಭಟನೆ ಕೈ ಬಿಟ್ಟು ಕಸ ಸಂಗ್ರಹ ಮಾಡುವಂತೆ ಅವರು ಮನವಿ ಮಾಡಿದ್ದರು. ಆದರೆ, ಇದಾವುದಕ್ಕೂ ಒಪ್ಪದ ಕಾರ್ಮಿಕರು, ಇಂತಹ ಭರವಸೆಗಳನ್ನು ಕೇಳಿ-ಕೇಳಿ ಸಾಕಾಗಿದ್ದು, ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹಠತೊಟ್ಟು ಪ್ರತಿಭಟನೆಯನ್ನು ಮುಂದುವರಿಸಿದ್ದರು.

ಗುರುವಾರ ಬೆಳಗ್ಗೆ ಕೂಡ ಕಸ ಸಂಗ್ರಹ ಆಗದಿರುವುದರ ಬಗ್ಗೆ ಮಾಹಿತಿ ಪಡೆದ ಮೇಯರ್ ಕವಿತಾ ಸನಿಲ್ ಅವರು, ಆಯುಕ್ತರು ಹಾಗೂ ಸಂಬಂಧಪಟ್ಟವರಿಗೆ ಕರೆ ಮಾಡಿ, ಮುಂದಿನ ಒಂದು ಗಂಟೆಯ ಒಳಗೆ ಆ್ಯಂಟನಿ ಸಂಸ್ಥೆಯವರು ಕಸ ಸಂಗ್ರಹ ಮಾಡಬೇಕು ಇಲ್ಲವಾದರೆ, ತುರ್ತಾಗಿ ಹಳೆಯ ಕಂಟ್ರಾಕ್ಟುದಾರರನ್ನು ಸಂಪರ್ಕಿಸಿ ಮಂಗಳೂರಿನ ಕಸ, ತ್ಯಾಜ್ಯ ಸಂಗ್ರಹ ಮಾಡಲಾಗುತ್ತದೆ. ಆ ಬಳಿಕ ಯಾವುದೇ ಕಾರಣಕ್ಕೂ ಆ್ಯಂಟನಿಯವರಿಗೆ ಅವಕಾಶ ನೀಡುವುದಿಲ್ಲ ಎಂದು ಮೇಯರ್ ಎಚ್ಚರಿಕೆ ನೀಡಿದ್ದರು.

ಈ ಕುರಿತ ಗಂಭೀರತೆಯನ್ನು ಅರಿತ ಸಂಸ್ಥೆಯವರು, ಬಹುತೇಕ ಕಾರ್ಮಿಕರಿಗೆ ತುರ್ತಾಗಿ ಸಂಬಳ ಪಾವತಿ ಮಾಡಿ, ಕಸ ಸಂಗ್ರಹ ಮಾಡುವಂತೆ ಕಾರ್ಮಿಕರಿಗೆ ಸೂಚಿಸಿದ್ದಾರೆನ್ನಲಾಗಿದೆ. ಇದರಂತೆ ಬೆಳಗ್ಗೆ ಸುಮಾರು 10ರ ವೆೀಳೆಗೆ ಕಸ ಸಂಗ್ರಹ ನಡೆಯಿತು.

ಸಂಬಳ ಸಮಸ್ಯೆಯ ಮಾಹಿತಿ ನೀಡಿರುವ ಕಾರ್ಮಿಕ ಸುಧೀರ್, ಹೊರಗುತ್ತಿಗೆ ಕಾರ್ಮಿಕರಿಗೆ ಸಿಗುವುದೇ ಅಲ್ಪ ವೇತನ. ಇದರಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಈ ತಿಂಗಳ ವೇತನ ಪಡೆಯಬೇಕಾದರೆ ಮುಂದಿನ ತಿಂಗಳ ಕೊನೆಯವರೆಗೆ ಕಾಯಬೇಕಾದ ಪರಿಸ್ಥಿತಿ. ವೇತನ ಪಾವತಿ ಕಾಯ್ದೆಯನ್ವಯ ಕ್ಲಪ್ತ ಸಮಯಕ್ಕೆ ಈವರೆಗೆ ವೇತನ ಸಿಗಲೇ ಇಲ್ಲ. ವೇತನ ಚೀಟಿ, ರಜೆ ಕಾರ್ಡು ಸಹ ಸಿಗುತ್ತಿಲ್ಲ. ಮುಷ್ಕರ ನಡೆಸಿದಾಗ ಭರವಸೆ ನೀಡಿ, ಪ್ರತಿಭಟನೆ ಹಿಂಪಡೆದಾಗ ಭರವಸೆ ಗಾಳಿಗೆ ತೂರುತ್ತಿದ್ದಾರೆ. ಇದನ್ನು ವಿರೋಧಿಸಿ ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ಮುಂದಾಗಿದ್ದೆವು. ಪ್ರಸ್ತುತ ಸಂಬಳ ಬಂದಿದೆ. ಹೀಗಾಗಿ ಮುಷ್ಕರ ಕೈಬಿಟ್ಟು ಗುರುವಾರ ಕಸ ಸಂಗ್ರಹ ಮಾಡಿದ್ದೇವೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News