ಶೋಭಾ ಕರಂದ್ಲಾಜೆ ತನ್ನ ಆಸ್ತಿಯನ್ನು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ನೀಡಲಿ: ಸಚಿವ ರೈ

Update: 2017-08-17 17:57 GMT

ಮಂಗಳೂರು, ಆ.17 : ಸಂಸದೆ ಶೋಭಾ ಕರಂದ್ಲಾಜೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಪ್ರೌಢಶಾಲೆಗಾಗಿ ಭಿಕ್ಷೆ ಎತ್ತುವ ನಾಟಕ ಮಾಡುವ ಬದಲು ತಾನು ಮಾಡಿರುವ ಆಸ್ತಿಯನ್ನು ಶಾಲೆಗೆ ನೀಡಲಿ. ಅದು ಶಾಲೆಗೆ ಬಹುಕಾಲ ಸಾಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಓರ್ವ ಸಾಮಾನ್ಯ ಮಹಿಳೆಯಾಗಿದ್ದ ಶೋಭಾ ಕರಂದ್ಲಾಜೆ  ಇದೀಗ ಭಾರೀ ಪ್ರಮಾಣದಲ್ಲಿ ಆಸ್ತಿ ಮಾಡಿದ್ದಾರೆ ಎಂದು ಆರೋಪಿಸಿ ಭಿಕ್ಷೆ ಬೇಡಿ ಶಾಲೆಗೆ ನೆರವು ನೀಡುವ ಬದಲು ಇದನ್ನು ನೀಡಿ ಸಹಾಯ ಮಾಡಲಿ ಎಂದರು.

ಶ್ರೀಮಂತ ಕುಟುಂಬಕ್ಕೆ ಸೇರಿದ ನಾನು ರಾಜಕೀಯಕ್ಕೆ ಬರುವ ಮೊದಲು ಸಾಕಷ್ಟು ಸ್ಥಿತಿವಂತನಾಗಿದ್ದೆ . ರಾಜಕೀಯಕ್ಕೆ ಬಂದ ಮೇಲೆ ಸಾಕಷ್ಟು ಕಳೆದುಕೊಂಡಿದ್ದೇನೆ ಎಂದ ಅವರು ರಾಜಕೀಯಕ್ಕೆ ಬರುವ ಮೊದಲು ಶೋಭಾ ಕರಂದ್ಲಾಜೆ ಬಳಿ ಎಷ್ಟು ಆಸ್ತಿ ಇತ್ತು. ಈಗ ಎಷ್ಟಾಗಿದೆ ಎಂಬುದನ್ನು ಅವರು ಬಹಿರಂಗಪಡಿಸಲಿ. ರಾಜಕೀಯಕ್ಕೆ ಬರುವ ಮೊದಲು ನನ್ನಲ್ಲಿ ಎಷ್ಟು ಆಸ್ತಿ ಇತ್ತು. ಈಗ ಎಷ್ಟಿದೆ ಎಂಬುದನ್ನು ನಾನು ಹೇಳುತ್ತೇನೆ ಎಂದವರು ಸವಾಲು ಹಾಕಿದರು.

ನನ್ನ ಶಾಲೆಯಲ್ಲಿ ಹಿಂದುಳಿದವರಿಗೆ ಉಚಿತ ಶಿಕ್ಷಣ ನೀಡಲಿ ಎಂಬುದಾಗಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಹೇಳಿರುವುದಾಗಿ ವರದಿಯಾಗಿದೆ. ನಾನು ಜಾಗ ಖರೀದಿಸಿ ನನ್ನ ಹಣದಲ್ಲಿ ಶಾಲೆ ಸ್ಥಾಪಿಸಿದ್ದೇನೆ. ಸರಕಾರದಿಂದ ಜಾಗ ಪಡೆದಿಲ್ಲ ಅಥವಾ ಶಿಕ್ಷಕರಿಗೆ ಸರಕಾರದಿಂದ ವೇತನ ವಾಪತಿಯಾಗುತ್ತಿಲ್ಲ. ಆದರೆ ಕಲ್ಲಡ್ಕ ಶಾಲೆಗೆ ಸರಕಾರದಿಂದ ಜಾಗ ನೀಡಲಾಗಿದೆ. ಅದನ್ನು ಕೂಡಾ ಬಹಳಷ್ಟು ಹಿಂದೆ ಕಾಂಗ್ರೆಸ್ ಸರಕಾರದವಿದ್ದಾಗ ನೀಡಲಾಗಿತ್ತು. ಅದೊಂದು ಅನುದಾನಿತ ಪ್ರೌಢಶಾಲೆಯಾಗಿದೆ. ಸರಕಾರದ ಬಿಸಿಯೂಟವನ್ನು ಅವರು ನಿರಾಕರಿಸಿದ್ದರು ಎಂದರು.

ಪಿಎಫ್ಐ ಸಂಘಟನೆಯನ್ನು ನಿಷೇಧಿಸಬೇಕು ಎಂಬುದಾಗಿ ವಿಶ್ವಹಿಂದು ಪರಿಷತ್ ಹಾಗೂ ಬಜರಂಗದಳದ ಆಗ್ರಹದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಜಿಲ್ಲೆಯಲ್ಲಿ ಕೆಲವು ಹತ್ಯೆಗಳಾಯಿತು. ಈ ಹಿಂದೆ ಕೋಮ ಗಲಭೆಯಾದಾಗ ಅದು ಒಂದೆರಡು ದಿನ ನಡೆದು ಬಳಿಕ ಶಾಂತವಾಗುತ್ತಿತ್ತು. ಬಳಿಕ ಮರೆತು ಬಿಡಲಾಗುತ್ತಿತ್ತು. ಈಗಿನ ಗಲಾಟೆ ಆಗಲ್ಲ. ಈ ಹತ್ಯೆ ಪ್ರಕರಣಗಳಲ್ಲಿ ಎರಡೂ ಮತೀಯವಾದಿ ಸಂಘಟನೆಗಳಿವೆ. ಅಶ್ರಫ್ ಹತ್ಯೆಯಲ್ಲಿ ಒಂದು ಕಡೆಯವರು ಇದ್ದರೆ, ಶರತ್ ಹತ್ಯೆಯಲ್ಲಿ ಇನ್ನೊಂದು ಕಡೆಯವರು ಇದ್ದಾರೆ. ಇದೀಗ ಅವರ ಬಂಧನವಾಗಿದೆ. ಜಿಲ್ಲೆಯಲ್ಲಿ ಈ ಎರಡೂ ಹತ್ಯೆಗಳು ಹಾಗೂ ಅದಕ್ಕೂ ಹಿಂದಿನ ಹತ್ಯಾಪ್ರಕರಣಗಳಲ್ಲಿ ಪಿತೂರಿದಾರರು ಯಾರಿದ್ದಾರೆ ಅವರನ್ನು ಕಂಡುಹಿಡಿದು ಬಂಧಿಸುವ ಕಾರ್ಯ ಆಗಬೇಕು. ನಾನು ಹಿಂದಿನಿಂದಲೂ ಜಾತ್ಯತೀತ ನಿಲುವು ಮೈಗೂಡಿಸಿಗೊಂಡವನು. ಮತೀಯವಾದವನ್ನು ವಿರೋಧಿಸುತ್ತಾ ಬಂದಿದ್ದೇನೆ. ನನ್ನನ್ನು ಎರಡೂ ಮತೀಯವಾದಿ ಸಂಘಟನೆಗಳು ವಿರೋಧಿಸುತ್ತಿವೆ. ನನ್ನ ರಾಜೀನಾಮೆ ಕೇಳುತ್ತಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News