ಆ. 19ರಿಂದ ರೋಟರಿ ಕ್ಲಬ್ ಆಶ್ರಯದಲ್ಲಿ ’ವಿಕಾಶ 2017’

Update: 2017-08-17 18:17 GMT

ಬಂಟ್ವಾಳ, ಆ. 17: ಬಂಟ್ವಾಳ ರೋಟರಿ ಕ್ಲಬ್ ಆಶ್ರಯದಲ್ಲಿ ’ವಿಕಾಶ 2017’ ಎಂಬ ರೋಟರಿ ಜಿಲ್ಲಾ ಮಟ್ಟದ ಸಮಾವೇಶ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ ಆಗಸ್ಟ್ 19 ಮತ್ತು 20ರಂದು ಬ್ರಹ್ಮರಕೊಟ್ಲುವಿನಲ್ಲಿರುವ ಬಂಟರ ಭವನದಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ರೋ. ಅಶ್ವನಿ ಕುಮಾರ್ ರೈ ತಿಳಿಸಿದ್ದಾರೆ.

ಬಂಟ್ವಾಳ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ರೋಟರಿ ಧ್ಯೇಯ ಧೋರಣೆಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಹಾಗೂ ಕ್ಲಬ್‌ನ ಸದಸ್ಯರ ಸಂಖ್ಯೆಯನ್ನು ವೃದ್ಧಿಸುವ, ಪೊಲೀಯೊ ನಿರ್ಮೂಲನೆಯ ಅವಶ್ಯಕತೆ ಮತ್ತು ಮಾಹಿತಿ ಹಕ್ಕು ಕಾಯ್ದೆಯ ಕುರಿತಾದ ವಿಚಾರ ಸಂಕಿರಣ, ಸಂವಾದ ಈ ಸಮಾವೇಶದಲ್ಲಿ ನಡೆಯಲಿದೆ ಎಂದು ಹೇಳಿದರು.

ಆಗಸ್ಟ್ 19ರಂದು ಸಂಜೆ 5:45ಕ್ಕೆ ಮಾಜಿ ಜಿಲ್ಲಾ ಗವರ್ನರ್ ಡಾ. ರಾಜೀವ ಮಧುಕರ್ ಪ್ರಧಾನ್ ಸಮಾವೇಶವನ್ನು ಉದ್ಘಾಟಿಸಲಿದ್ದು, 3181ರ ರೋಟರಿ ಜಿಲ್ಲಾ ಗವರ್ನರ್ ಎಂ.ಎಂ.ಸುರೇಶ್ ಚಂಗಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ರವೀಂದ್ರನಾಥ್ ಶಾನುಭೋಗ್ ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಸಮಗ್ರ ಮಾಹಿತಿ ನೀಡಲಿದ್ದಾರೆ.

ಆಗಸ್ಟ್ 20ರಂದು ರೋಟರಿ ಜಿಲ್ಲೆ 3191ರ ಪಿಡಿಜಿಎಚ್ ರಾಜೇಂದ್ರ ರೈ ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ. ಸದಸ್ಯತ್ವ ವೃದ್ಧಿಗೊಳಿಸುವ ಕುರಿತಾಗಿ ಡಾ. ರಾಜೀವ ಮಧುಕರ್ ಪ್ರಧಾನ್ ಮಾಹಿತಿ ನೀಡಲಿದ್ದಾರೆ. ಸತೀಶ್ ಬೋಳಾರ್ ಹೊಸ ಕ್ಲಬ್ ರಚಣೆಯ ಬಗ್ಗೆ ಮಾಹಿತಿ ನೀಡುವರು. ರೋ. ಡಾ. ಅರವಿಂದ ಭಟ್ ಪಿಡಿಜಿ ಯು.ಸೂರ್ಯ ಪ್ರಕಾಶ್ ಭಟ್, ರೋ. ಪಿ.ರೋಹಿನಾಥ್, ರೋ. ಜೋಸೆಫ್ ಮ್ಯಾಥ್ಯೂ, ಮಾಹಿತಿ ಹಕ್ಕು ಜಿಲ್ಲಾ ಚೆಯರ್‌ಮೆನ್ ಬಿ.ವಿ.ಜವರೇ ಗೌಡ, ಪಲ್ಸ್‌ಪೋಲ್ಯೋ ಜಿಲ್ಲಾ ಚಯರ್‌ಮೆನ್ ಡಾ. ರೋರ್ಮನ್ ಮೆಂಡೋನ್ಸಾ ಹಾಗೂ ವಲಯ ನಾಲ್ಕರ ಎಜಿ ಎ.ಎಂ.ಕುಮಾರ್ ಅಥಿತಿಯಾಗಿ ಭಾಗವಹಿಸುವರು.

ಈ ಸಮಾವೇಶದ ಯಶಸ್ವಿಗೆ ಬಂಟ್ವಾಳ ರೋಟರಿ ಕ್ಲಬ್ ಹಲವು ಉಪ ಸಮಿತಿಗಳನ್ನು ರಚಿಸಿ ಶ್ರಮಿಸುತ್ತಿದೆ. ರೋಟರಿ ಜಿಲ್ಲೆ 3181ರ ವ್ಯಾಪ್ತಿಗೆ ಒಳಪಟ್ಟ ಮೈಸೂರು, ದಕ್ಷಿಣ ಕನ್ನಡ, ಮಡಿಕೇರಿ, ಚಾಮರಾಜನಗರವನ್ನೊಳಗೊಂಡ ನಾಲ್ಕು ಜಿಲ್ಲೆಗಳ ಸುಮಾರು 700ಕ್ಕೂ ಅಧಿಕ ಮಂದಿ ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಅಶ್ವನಿ ಕುಮಾರ್ ರೈ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ರೋ. ಬಿ.ಸಂಜೀವ ಪೂಜಾರಿ, ಕಾರ್ಯದರ್ಶಿ ರೋ. ಕೆ.ನಾರಾಯಣ ಹೆಗ್ಡೆ, ವಿವಿಧ ಸಮಿತಿ ಪದಾಧಿಕಾರಿಗಳಾದ ರೋ. ಮುಹಮ್ಮದ್ ವಳವೂರು, ರೋ. ಪ್ರಕಾಶ್ ಕಾರಂತ್, ರೋ. ಮಂಜುನಾಥ ಆಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News