ಗೋರಖ್‌ಪುರ ದುರಂತ: ಪ್ರತಿ ಅಫಿದಾವಿತ್ ದಾಖಲಿಸುವಂತೆ ಉ.ಪ್ರ. ಸರಕಾರಕ್ಕೆ ಹೈಕೋರ್ಟ್ ಆದೇಶ

Update: 2017-08-18 16:22 GMT

ಗೋರಖ್‌ಪುರ, ಆ. 18: ಗೋರಖ್‌ಪುರದ ಬಿಆರ್‌ಡಿ ಆಸ್ಪತ್ರೆಯಲ್ಲಿ ಸಂಭವಿಸಿದ ಮಕ್ಕಳ ಸಾವಿನ ಬಗ್ಗೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ದಾವೆಗೆ 6 ವಾರಗಳಲ್ಲಿ ಪ್ರತಿಕ್ರಿಯೆ ದಾಖಲಿಸುವಂತೆ ಅಲಹಾಬಾದ್ ಉಚ್ಚ ನ್ಯಾಯಾಲಯ ಉತ್ತರಪ್ರದೇಶ ಸರಕಾರ ಹಾಗೂ ವೈದ್ಯಕೀಯ ಶಿಕ್ಷಣದ ಪ್ರಧಾನ ನಿರ್ದೇಶಕರಿಗೆ ಶುಕ್ರವಾರ ಆದೇಶಿಸಿದೆ. ಉಚ್ಚ ನ್ಯಾಯಾಲಯದ ಲಕ್ನೋ ಪೀಠ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 9ರಂದು ನಿಗದಿಗೊಳಿಸಿದೆ.

  ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ ಸಾಮಾಜಿಕ ಕಾರ್ಯಕರ್ತೆ ನೂತನ್ ಠಾಕೂರ್, ಅಡ್ವೊಕೇಟ್ ಜನರಲ್ ರಾಘವೇಂದ್ರ ಪ್ರತಾಪ್ ಸಿಂಗ್, ವೈದ್ಯಕೀಯ ಶಿಕ್ಷಣ ಸಮಾಲೋಚಕ ಸಂಜಯ್ ಭಾಸಿನ್ ಅವರ ವಾದ ಆಲಿಸಿದ ಬಳಿಕ ನ್ಯಾಯಮೂರ್ತಿ ವಿಕ್ರಮ್ ನಾಥ್ ಹಾಗೂ ದಯಾ ಶಂಕರ್ ಅವರನ್ನೊಳಗೊಂಡ ಪೀಠ ಈ ಆದೇಶ ಜಾರಿ ಮಾಡಿತು.

ಈ ವಿಷಯದಲ್ಲಿ ಮುಖ್ಯ ಕಾರ್ಯದರ್ಶಿ ಸಲ್ಲಿಸಿರುವ ವರದಿ ಆಧರಿಸಿ ಸರಕಾರ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರತಿಪಾದಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಅಡ್ವೊಕೇಟ್ ಜನರಲ್ ನಿರಾಕರಿಸಿದ್ದಾರೆ.

 ಇದುವರೆಗೆ ರಾಜ್ಯ ಸರಕಾರ ಕೈಗೊಂಡ ಕ್ರಮಗಳು, ಅದು ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಹಾಗೂ ಸತ್ಯ ಮರೆಮಾಚಲು ಪ್ರಯತ್ನಿಸುತ್ತಿರುವ ಸಂದೇಶ ರವಾನಿಸುತ್ತಿದೆ ಎಂದು ಠಾಕೂರ್ ಪ್ರತಿಪಾದಿಸಿದರು.

ಗೋರಖ್‌ಪುರ ದುರಂತ ಆಮ್ಲಜನಕ ಪೂರೈಕ ಸ್ಥಗಿತಗೊಳಿಸಿಲ್ಲ: ಕಂಪೆನಿ

 ಗೋರಖ್‌ಪುರದ ಬಾಬಾ ರಾಘವ ದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದ್ರವೀಕೃತ ಆಮ್ಲಜನಕ ಪೂರೈಕೆ ನಿಲ್ಲಿಸಿರುವುದರಿಂದ ಮಕ್ಕಳ ಸಾವಿನ ಹೊಣೆ ಹೊರಬೇಕೆಂಬ ನ್ಯಾಯಾಂಗ ವರದಿಯನ್ನು ಪುಷ್ಪಾ ಸೇಲ್ಸ್ ಪ್ರೈವೇಟ್ ಲಿಮಿಟೆಡ್ ನಿರಾಕರಿಸಿದೆ.

ನಾವು ಆಮ್ಲಜನಕ ಪೂರೈಕೆ ನಿಲ್ಲಿಸಲಿಲ್ಲ. ಆದರೆ, ಬಾಕಿ ಇರುವ ಮೊತ್ತ ಪಾವತಿಸುವಂತೆ ಒತ್ತಡ ಹೇರಿದ್ದೇವೆ ಎಂದು ಪುಷ್ಪಾ ಸೇಲ್ಸ್ ಪ್ರೈವೇಟ್ ಲಿಮಿಟೆಡ್ ಹೇಳಿದೆ. ನನ್ನ ಹೇಳಿಕೆ ದೃಢೀಕರಿಸಲು ಸರಕಾರಕ್ಕೆ ಪುರಾವೆಗಳನ್ನು ಸಲ್ಲಿಸಲು ನಾನು ಬಯಸಿದ್ದೆ ಎಂದು ಕಂಪೆನಿ ಮಾಲಕ ಮನೀಶ್ ಭಂಡಾರಿ ಹೇಳಿದ್ದಾರೆ.

ಅವರು ನ್ಯಾಯಾಂಗ ವರದಿ ಸಲ್ಲಿಸಿದ್ದರೆ, ನಾವು ಕೂಡ ನಮ್ಮ ಪುರಾವೆ ಸಲ್ಲಿಸಲಿದ್ದೇವೆ. ನಾವು ಆಮ್ಲಜನಕ ಪೂರೈಕೆ ಸ್ಥಗಿತಗೊಳಿಸಿಲ್ಲ ಎಂದು ಈಗಾಗಲೇ ಹೇಳಿದ್ದೇವೆ. ನಾವು ಅದನ್ನು ಸಾಬೀತು ಮಾಡಲಿದ್ದೇವೆ ಎಂದು ಭಂಡಾರಿ ಹೇಳಿದ್ದಾರೆ.

ಉತ್ತರಪ್ರದೇಶ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಗೋರಖ್‌ಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೀವ್ ರೌಟೇಲಾ, ಪುಷ್ಪಾ ಸೇಲ್ಸ್ ಜೀವ ಉಳಿಸುವ ಉದ್ಯಮದಲ್ಲಿ ತೊಡಗಿಕೊಂಡಿರುವುದರಿಂದ ಆಸ್ಪತ್ರೆಗೆ ಆಮ್ಲಜನಕ ಪೂರೈಕೆಯನ್ನು ಸ್ಥಗಿತಗೊಳಿಸಬಾರದಿತ್ತು ಎಂದಿದ್ದರು.

 ಈ ಆರೋಪವನ್ನು ಆಸ್ಪತ್ರೆಯ ಆಡಳಿತ ಮಂಡಳಿಯತ್ತ ವರ್ಗಾಯಿಸಿರುವ ಭಂಡಾರಿ, ಆಮ್ಲಜನಕ ಸಿಲಿಂಡರ್‌ಗಳ ದಾಸ್ತಾನು ನಿರ್ವಹಿಸುವುದು ಆಸ್ಪತ್ರೆ ಜವಾಬ್ದಾರಿ. ಆಸ್ಪತ್ರೆಗೆ ಆಮ್ಲಜನಕ ಸಿಲಿಂಡರ್ ಪೂರೈಸಲು ಇನ್ನೊಂದು ಸಂಸ್ಥೆ ಕೂಡ ಗುತ್ತಿಗೆ ಪಡೆದುಕೊಂಡಿದೆ ಎಂದಿದ್ದಾರೆ.

 ಆಮ್ಲಜನಕ ಸಿಲಿಂಡರ್‌ಗಳ ಕೊರತೆ ಉಂಟಾಗಲು ಭ್ರಷ್ಟಾಚಾರವೇ ಕಾರಣ ಎಂದು ಮನೀಶ್ ಭಂಡಾರಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News