×
Ad

ಬೇಡಿಕೆ ಈಡೇರಿಸದಿದ್ದಲ್ಲಿ ಅಂಚೆ ಕಚೇರಿ ಮುತ್ತಿಗೆಯ ಎಚ್ಚರ

Update: 2017-08-18 21:12 IST

ಪುತ್ತೂರು, ಆ. 18: ಕಳೆದ ಮೂರು ದಿನಗಳಿಂದ ಅನಿರ್ಧಿಷ್ಟ ಅವಧಿ ಮುಷ್ಕರ ನಡೆಸುತ್ತಿರುವ ಗ್ರಾಮೀಣ ಅಂಚೆ ನೌಕರರು ತಮ್ಮ ಬೇಡಿಕೆ ಈಡೇರದಿದ್ದರೆ ಸೋಮವಾರದಿಂದ ಪುತ್ತೂರು ಪ್ರಧಾನ ಅಂಚೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಇದರಿಂದ ಗ್ರಾಹಕರಿಗೆ ತೊಂದರೆ ಯಾದರೆ ಕೇಂದ್ರ ಸರಕಾರ ಹೊಣೆಯಾಗಲಿದೆ ಎಂದು ಪುತ್ತೂರಿನಲ್ಲಿ ಗ್ರಾಮೀಣ ಅಂಚೆ ನೌಕರರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಅಂಚೆ ಕಚೇರಿ ಮುಂಭಾಗದಿಂದ ಪ್ರತಿಭಟನಕಾರರು ಮುಖ್ಯರಸ್ತೆಯಲ್ಲಿ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿ ಮಿನಿ ವಿಧಾನಸೌಧದ ಬಳಿಕ ಸಮಾಗಮಗೊಂಡು ಪ್ರದರ್ಶನ ನಡೆಸಿದರು. ಬಳಿಕ ಸಹಾಯಕ ಆಯುಕ್ತರಿಗೆ ಮತ್ತು ಶಾಸಕಿ ಶಕುಂತಳಾಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.

 ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಪುತ್ತೂರು ವಿಭಾಗೀಯ ಕಾರ್ಯದರ್ಶಿ ಸುನಿಲ್ ದೇವಾಡಿಗ ಅವರು ಈಗ ನಮ್ಮ ತಾಳ್ಮೆಯ ಕಟ್ಟೆ ಒಡೆಯುತ್ತಿದೆ. ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಕನಿಷ್ಠ ನಮ್ಮನ್ನು ಕರೆಸಿ ಮಾತನಾಡುವ ಸೌಜನ್ಯವನ್ನೂ ಸರಕಾರ ತೋರುತ್ತಿಲ್ಲ. ನಾವು ನಮ್ಮ ಬೇಡಿಕೆಗಳ ಬಗ್ಗೆ ಮೂರು ತಿಂಗಳ ಹಿಂದೆ ಮನವಿ ಸಲ್ಲಿಸಿ ಪ್ರತಿಭಟನೆಯ ಎಚ್ಚರಿಕೆ ನೀಡಿದಾಗ ಮೂರು ತಿಂಗಳು ಸಮಯ ಕೊಡಿ ಎಂದು ಕೇಳಿದ್ದರು. ಅದರಂತೆ ಸಮಯ ಕೊಟ್ಟೆವು. ಆದರೆ ಏನೂ ಪ್ರಗತಿಯಾಗಿಲ್ಲ. ಈ ಬಾರಿ ಕೂಡ ಮುಂಗಡ ನೊಟೀಸ್ ನೀಡಿಯೇ ಪ್ರತಿಭಟನೆಗೆ ಇಳಿದಿದ್ದೇವೆ. ಈ ಬಾರಿ ಮಾತ್ರ ನಾವು ನ್ಯಾಯ ಸಿಗುವವರೆಗೂ ಹೋರಾಡಲಿದ್ದೇವೆ. ಕಳೆದ ಮೂರು ದಿನಗಳಿಂದ ದೇಶದಾದ್ಯಂತ ಪ್ರತಿಭಟನೆ ಮಾಡುತ್ತಿದ್ದರೂ ಕೇಂದ್ರ ಸರಕಾರ ಇನ್ನೂ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ ಎಂದು ದೂರಿದರು.

ಐದು ತಾಲೂಕು ವ್ಯಾಪ್ತಿ ಹೊಂದಿರುವ ಪುತ್ತೂರು ವಿಭಾಗದ ಗ್ರಾಮೀಣ ಅಂಚೆ ನೌಕರರು ಕಳೆದ ಮೂರು ದಿನಗಳಿಂದ ಪುತ್ತೂರಿನ ಪ್ರಧಾನ ಅಂಚೆ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದು, ಶುಕ್ರವಾರ ಪ್ರಧಾನ ಕಚೇರಿಯ ಬಾಗಿಲಲ್ಲೇ ಪ್ರದರ್ಶನ ನಡೆಸಿದರು. ಬಳಿಕ ನಗರದಲ್ಲಿ ಮೆರವಣಿಗೆ ನಡೆಸಿ ಮಿನಿವಿಧಾನ ಸೌಧದ ಮುಂಬಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಹಲವು ದಶಕಗಳಿಂದ ಯಾವುದೇ ಸೌಕರ್ಯವಿಲ್ಲದೆ ಜೀತದಾಳುಗಳಂತೆ ದುಡಿಯುತ್ತಿರುವ ಗ್ರಾಮೀಣ ಅಂಚೆ ನೌಕರರನ್ನು ಸರಕಾರಿ ನೌಕರರನ್ನಾಗಿ ಮಾನ್ಯ ಮಾಡಿ ಸೂಕ್ತ ಸವಲತ್ತು ನೀಡಬೇಕೆಂದು ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಕರೆಯಂತೆ ಈ ಸತ್ಯಾಗ್ರಹ ನಡೆಯುತ್ತಿದೆ.ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಮತ್ತು ಕಾರ್ಕಳ ತಾಲೂಕುಗಳನ್ನು ಒಳಗೊಂಡ ಪುತ್ತೂರು ವಿಭಾಗದ 353 ಶಾಖಾ ಕಚೇರಿಗಳ 865 ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದು, ಇದರ ಪರಿಣಾಮ ಮೂರು ದಿನಗಳಿಂದ 353 ಶಾಖಾ ಅಂಚೆ ಕಚೇರಿಗಳು ಕಾರ್ಯ ಸ್ಥಗಿತಗೊಂಡಿವೆ.

ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಪುತ್ತೂರು ವಿಭಾಗದ ಗೌರವಾಧ್ಯಕ್ಷ ಜಗತ್ಪಾಲ್ ಹೆಗ್ಡೆ, ಕರ್ನಾಟಕ ವಲಯ ಉಪಾಧ್ಯಕ್ಷ ಪ್ರಮೋದ್ ಕುಮಾರ್ ಬಳಂಜ, ಪುತ್ತೂರು ವಿಭಾಗೀಯ ಅಧ್ಯಕ್ಷ ವಿಠಲ ಎಸ್. ಪೂಜಾರಿ, ಕಾರ್ಕಳ ಉಪ ವಿಭಾಗದ ಅಧ್ಯಕ್ಷ ಅಶೋಕ್ ಅಂಡಾರು, ಪುತ್ತೂರು ವಿಭಾಗದ ಕೋಶಾಧಿಕಾರಿ ಶಕೀಲಾ, ಬಂಟ್ವಾಳ ವಲಯ ಅಧ್ಯಕ್ಷ ಶ್ರೀಧರ ಸಿದ್ಧಕಟ್ಟೆ, ಪುತ್ತೂರು ವಲಯದ ಮಾಜಿ ಕಾರ್ಯದರ್ಶಿ ಗಣೇಶ್ ರೈ, ಪ್ರಮುಖರಾದ ಅಬ್ದುಲ್ ಕಲಾಂ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News