ಕಳಪೆ ಗುಣಮಟ್ಟದ ತೂಕದ ಯಂತ್ರಗಳ ಬಳಕೆಗೆ ಕಡಿವಾಣ: ಸಚಿವ ಯು.ಟಿ.ಖಾದರ್

Update: 2017-08-18 16:06 GMT

ಮಂಗಳೂರು, ಆ. 18: ರಾಜ್ಯದಲ್ಲಿ ಕಳಪೆ ಗುಣಮಟ್ಟದ ಮತ್ತು ಕೇಂದ್ರ ಸರಕಾರದಿಂದ ಅನುಮೋದನೆ ಹೊಂದಿಲ್ಲದ ತೂಕದ ಯಂತ್ರಗಳ ಬಳಕೆಗೆ ಕಡಿವಾಣ ಹಾಕಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಚೀನಾ ದೇಶದ ತೂಕದ ಯಂತ್ರ ಬಳಕೆಯಾಗಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಇದರಿಂದ ಪಡಿತರದಾರರು ಮೋಸ ಹೋಗುತ್ತಿದ್ದಾರೆ. ಗ್ರಾಹಕರಿಗೆ ತೂಕದಲ್ಲಾಗುವ ಮೋಸವನ್ನು ತಡೆಗಟ್ಟುವ ಹಾಗೂ ಅಧಿಕೃತ ಯಂತ್ರಗಳ ಬಳಕೆ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗಳು ರಾಜ್ಯದಲ್ಲಿ ಎರಡು ದಿನಗಳಿಂದ ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ದಾಳಿ ನಡೆಸಿ ತೂಕದ ಯಂತ್ರಗಳ ಪರಿಶೀಲನೆ ನಡೆಸಿದ್ದಾರೆ.  394 ತೂಕದ ಯಂತ್ರಗಳ ಪರಿಶೀಲನೆಯಲ್ಲಿ 71 ಅಕ್ರಮ ಕಂಡುಬಂದಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.

ಪಾಯಿಂಟ್ ಆಫ್ ಸೇಲ್ ಯಂತ್ರಕ್ಕೆ ನಿರ್ದೇಶನ

ರಾಜ್ಯದಲ್ಲಿ 24,400 ನ್ಯಾಯಬೆಲೆ ಅಂಗಡಿಗಳಿದ್ದು, ಇವುಗಳಲ್ಲಿ ಪಾಯಿಂಟ್ ಆಫ್ ಸೇಲ್ ಯಂತ್ರ ಅಳವಡಿಸಲು ನಿರ್ದೇಶನ ನೀಡಲಾಗಿದೆ. ಈ ಯಂತ್ರ ದಿಂದ ಪಡಿತರ ಚೀಟಿದಾರರು ಎಷ್ಟು ಪ್ರಮಾಣದ ಪಡಿತರಗಳನ್ನು ಪಡೆದಿದ್ದಾರೆ ಎಂದು ತಿಳಿಯಲಾಗುವುದು. ರಾಜ್ಯದಲ್ಲಿ ಈಗಾಗಲೇ ಸುಮಾರು 10,000 ನ್ಯಾಯಬೆಲೆ ಅಂಗಡಿಗಳಲ್ಲಿ ಪಾಯಿಂಟ್ ಆಫ್ ಸೇಲ್ ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ಖಾದರ್ ಹೇಳಿದರು.

ಇಂಟರ್‌ನೆಟ್ ಸಂಪರ್ಕ ಇಲ್ಲದ ಮತ್ತು ಸಂಪರ್ಕದಲ್ಲಿ ಸಮಸ್ಯೆ ಇರುವ ಪ್ರದೇಶಗಳ ಅಂಗಡಿಗಳಲ್ಲಿ ಪಾಯಿಂಟ್ ಆಫ್ ಸೇಲ್ ಯಂತ್ರಗಳ ಅಳವಡಿಕೆಗೆ ವಿನಾಯಿತಿ ನೀಡಲಾಗಿದೆ. ಭವಿಷ್ಯದಲ್ಲಿ ಎಲ್ಲಾ ಅಂಗಡಿಗಳಿಗೂ ಪಾಯಿಂಟ್ ಆಫ್ ಸೇಲ್ ಕಡ್ಡಾಯಗೊಳಿಸಲಾಗುವುದು. ಈ ಯಂತ್ರ ಅಳವಡಿಸಿದ ಅಂಗಡಿಗಳ ಮಾಲಕರಿಗೆ ಕ್ವಿಂಟಾಲ್‌ಗೆ 83 ರೂ. ಕಮಿಷನ್ ಹಾಗೂ ಯಂತ್ರ ಅಳವಡಿಸದ ಅಂಗಡಿಗಳ ಮಾಲಕರಿಗೆ ಪಡಿತರ ಚೀಟಿವೊಂದರಂತೆ 13 ರೂ. ಕಮಿಷನ್ ನೀಡಲಾಗುವುದು ಎಂದು ಸಚಿವರು ನುಡಿದರು.

ಕಲ್ಲಡ್ಕ ಶಾಲೆಗೆ ಅನುದಾನ ನಿಲುಗಡೆ ಧಾರ್ಮಿಕ ಪರಿಷತ್ತಿನ ನಿರ್ಧಾರವಾಗಿದೆ. ಇದಕ್ಕಾಗಿ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಆಹಾರ ಸಚಿವರನ್ನು ಹೊಣೆ ಮಾಡುವುದು ಸರಿಯಲ್ಲ. ಧಾರ್ಮಿಕ ಪರಿಷತ್‌ನಿಂದ ಶಾಲೆಗೆ ತೊಂದರೆಯಾಗಿದ್ದರೆ ಮುಜರಾಯಿ ಸಚಿವರಿಗೆ ದೂರು ಸಲ್ಲಿಸಿ ನ್ಯಾಯ ಪಡೆದು ಕೊಳ್ಳುವ ಅವಕಾಶ ಇದೆ ಎಂದು ಖಾದರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆಹಾರ ಇಲಾಖೆಯ ಉಪ ನಿರ್ದೇಶಕ ಎ.ಟಿ.ಜಯಪ್ಪ, ಕೆಎಸ್ಸಾರ್ಟಿಸಿ ನಿರ್ದೇಶಕ ರಮೇಶ್ ಶೆಟ್ಟಿ, ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಎನ್.ಎಸ್.ಕರೀಂ, ಜಿ.ಪಂ. ಸದಸ್ಯೆ ಸೀಮಾ ಮೆಲ್ವಿನ್, ಮಂಗಳೂರು ತಾ.ಪಂ. ಸದಸ್ಯೆ ಪದ್ಮಾವತಿ, ಕೌನ್ಸಿಲರ್ ಉಸ್ಮಾನ್ ಕಲ್ಲಾಪು, ದೀಪಕ್ ಪೂಜಾರಿ, ಪಿಯೂಸ್ ಮೊಂತೆರೊ ಮೊದಲಾದವರು ಉಪಸ್ಥಿತರಿದ್ದರು.

2.5 ಲಕ್ಷ ಪಡಿತರ ಅರ್ಜಿಗಳ ಪರಿಶೀಲನೆ ಪೂರ್ಣ

ರಾಜ್ಯದಲ್ಲಿ ಪಡಿತರ ಚೀಟಿಗಾಗಿ 16 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಮೊದಲ ಕಂತಿನಲ್ಲಿ 8.5 ಲಕ್ಷ ಅರ್ಜಿಗಳನ್ನು ಪರಿಶೀಲನೆಗೆ ಕಂದಾಯ ಇಲಾಖೆಗೆ ನೀಡಲಾಗಿದೆ. ಆ ಪೈಕಿ 2.5 ಲಕ್ಷ ಅರ್ಜಿಗಳ ಪರಿಶೀಲನೆ ಪೂರ್ಣಗೊಂಡಿದೆ. ಉಳಿದ ಅರ್ಜಿಗಳನ್ನು ಕಂದಾಯ ಇಲಾಖೆಗೆ ನೀಡಲಾಗುವುದು. ಅಂಗೀಕೃತ 50,000 ಅರ್ಜಿಗಳು ಮದ್ರಾಣಾಲಯಕ್ಕೆ ತಲುಪಿವೆ ಸಚಿವ ಯು.ಟಿ.ಖಾದರ್ ಮಾಹಿತಿ ನೀಡಿದರು.

ವೈದ್ಯಕೀಯ ಸೌಲಭ್ಯಕ್ಕೆ ತಕ್ಷಣ ಪಡಿತರ ಚೀಟಿ

ರೋಗಿಗಳ ಚಿಕಿತ್ಸೆ ಸಂದರ್ಭದಲ್ಲಿ ಕೆಲವೊಮ್ಮೆ ಪಡಿತರ ಚೀಟಿಯ ಅಗತ್ಯ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ವೈದ್ಯಕೀಯ ಸೌಲಭ್ಯ ಪಡೆಯಲು ಆದಾಯ ದೃಢಪತ್ರದೊಂದಿಗೆ ಜಿಲ್ಲೆಯ ಆಹಾರ ಇಲಾಖೆಯ ಉಪ ನಿರ್ದೇಶಕರನ್ನು ಭೇಟಿ ಮಾಡಿ ತಕ್ಷಣ ಪಡಿತರ ಚೀಟಿ ಪಡೆಯಬಹುದು ಎಂದು ಸಚಿವ ಖಾದರ್, ಆದರೆ ಇದು ಆರೋಗ್ಯ ಕುರಿತಾದ ತುರ್ತು ಸಂದರ್ಭಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಸ್ಪಷ್ಟ ಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News