ಕಾರ್ತಿಕ್‌ರಾಜ್ ಕೊಲೆ ಪ್ರಕರಣ: ಜಾಮೀನು ನಿರಾಕರಣೆ
ಮಂಗಳೂರು, ಆ. 18: ನಗರದ ಹೊರವಲಯದ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016 ಅಕ್ಟೋಬರ್ 22ರಂದು ನಡೆದ ಕಾರ್ತಿಕ್‌ರಾಜ್ ಕೊಲೆ ಪ್ರಕರಣದಲ್ಲಿ ಬಂಧಿತ ಮೂವರು ಆರೋಪಿಗಳ ಪೈಕಿ ಓರ್ವ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಮಂಗಳೂರಿನ 6ನೆ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಶುಕ್ರವಾರ ಆತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಕುತ್ತಾರ್ ಸಂತೋಷ ನಗರ ನಿವಾಸಿ ಗೌರವ್ (19) ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಈತನಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ. ನ್ಯಾಯಾಧೀಶ ಡಿ.ಟಿ.ಪುಟ್ಟರಂಗ ಸ್ವಾಮಿ ಅವರು ಆರೋಪಿಯ ಜಾಮೀನು ಅರ್ಜಿಯನ್ನು ಪರಿಶೀಲಿಸಿ, ತೀರ್ಪು ಪ್ರಕಟಿಸಿದ್ದಾರೆ.
ಪ್ರಕರಣದಲ್ಲಿ ಇನ್ನಿಬ್ಬರು ಪ್ರಮುಖ ಆರೋಪಿಗಳಾದ ಕೊಲೆಯಾದ ಕಾರ್ತಿಕ್‌ರಾಜ್ ಸಹೋದರಿ ಪಜೀರು ಗ್ರಾಮದ ಸುದರ್ಶನ ನಗರದ ನಿವಾಸಿ ಕಾವ್ಯಾಶ್ರೀ (25) ಹಾಗೂ ಈಕೆಯ ಪ್ರಿಯಕರ ಕುತ್ತಾರ್ ಸಂತೋಷ ನಗರದ ನಿವಾಸಿ ಗೌತಮ್ (26) ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಈ ಮೂವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಗೌತಮ್ ಮತ್ತು ಗೌರವ್ ಸಹೋದರರಾಗಿದ್ದಾರೆ. ಸರ್ಕಾರಿ ಅಭಿಯೋಜಕರಾದ ಜುಡಿತ್ ಒ.ಎಂ. ಕ್ರಾಸ್ತಾ ಸರಕಾರದ ಪರವಾಗಿ ವಾದಿಸಿದ್ದರು.