ವೇಣೂರು: ಭಾರತೀಯ ಜೈನ್ ಮಿಲನ್ ಪದಗ್ರಹಣ
ಬೆಳ್ತಂಗಡಿ, ಆ. 18: ಸಮಾಜ ಬಾಂಧವರನ್ನು ಆಗಾಗ ಒಟ್ಟಿಗೆ ಸೇರಿಸುವ ಕೆಲಸ ಜೈನ್ ಮಿಲನ್ ಮಾಡುತ್ತಾ ಬಂದಿದೆ. ಜೈನ್ ಮಿಲನ್ ಸಂಘಟನೆ, ಜಾಗೃತಿಗೆ ಪ್ರೇರಣೆ ಆಗಿದೆ ಎಂದು ಮಾಜಿ ಕೇಂದ್ರ ಸಚಿವ ವಿ. ಧನಂಜಯ ಕುಮಾರ್ ಹೇಳಿದರು.
ಅವರು ವೇಣೂರು ಶ್ರೀ ಬಾಹುಬಲಿ ಕ್ಷೇತ್ರದಲ್ಲಿ ಜರಗಿದ ವೇಣೂರು ಭಾರತೀಯ ಜೈನ್ ಮಿಲನ್ ಪದಗ್ರಹಣ ಹಾಗೂ ಎರ್ಮೋಡಿ ಗುಣಪಾಲ ಜೈನ್ ಸ್ಮರಣಾರ್ಥ ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಅಭಿವೃದ್ಧಿಯ ಚಿಂತಕರಾಗಿದ್ದ ದಿ ಗುಣಪಾಲ ಜೈನ್ ಅವರು ಕ್ಷೇತ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದವರಾಗಿದ್ದಾರೆ. ಅವರ ಸಮಾಜಮುಖಿ ಕಾರ್ಯಗಳನ್ನು ಅವರ ಧರ್ಮಪತ್ನಿ ಹಾಗೂ ಮಕ್ಕಳು ಮುಂದುವರಿಸಿಕೊಂಡು ಹೋಗುವುದರ ಮೂಲಕ ಅವರ ನೆನಪನ್ನು ಸಮಾಜದಲ್ಲಿ ಶ್ವಾಸ್ವತವಾಗಿ ಉಳಿಯುವಂತೆ ಮಾಡಿದ್ದಾರೆ ಎಂದರು.
ಸಮಾರಂಭದಲ್ಲಿ ಪುಷ್ಪದಂತ 108 ಶ್ರೀ ಪ್ರಸಂಗಸಾಗರ ಮುನಿ ಮಹಾರಾಜರು ಆಶೀರ್ವಚನ ನೀಡಿದರು. ದಿ ಎರ್ಮೋಡಿ ಗುಣಪಾಲ ಜೈನ್ ಸ್ಮರಣಾರ್ಥ ಅವರ ಪತ್ನಿ ಸರೋಜಾ ಗುಣಪಾಲ ಜೈನ್ ಹಾಗೂ ಮನೆಯವರ ವತಿಯಿಂದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಲಯದ ಭಾರತೀಯ ಜೈನ್‌ಮಿಲನ್ ಅಧ್ಯಕ್ಷ ಪುಷ್ಪರಾಜ್ ಜೈನ್ ವಹಿಸಿದ್ದರು. ಮಂಗಳೂರು ವಿಭಾಗದ ಭಾರತೀಯ ಜೈನ್‌ಮಿಲನ್ ನಿರ್ದೇಶಕ ಬಿ. ಸೋಮಶೇಖರ ಶೆಟ್ಟಿ, ಮೂಡಬಿದಿರೆ ಕಲ್ಲಬೆಟ್ಟು ಎಕ್ಸ್‌ಲೆಂಟ್ ಕಾಲೇಜಿನ ಸಂಚಾಲಕ ಯುವರಾಜ ಜೈನ್, ವೇಣೂರು ದಿಗಂಬರ ಜೈನತೀರ್ಥ ಕ್ಷೇತ್ರ ಸಮಿತಿ ಕಾರ್ಯದರ್ಶಿ ವಿಜಯರಾಜ ಅಧಿಕಾರಿ ಮಾರಗುತ್ತು, ಕೋಶಾಧಿಕಾರಿ ರತ್ನವರ್ಮ ಇಂದ್ರ ಬಜಿರೆ, ಸರೋಜಾ ಗುಣಪಾಲ ಜೈನ್ ಎರ್ಮೋಡಿ, ಡಾ ಪ್ರಣಮ್ಯ ಮಹಾವೀರ ಜೈನ್, ವೇಣೂರು ಜೈನ್ ಮಿಲನ್ ಅಧ್ಯಕ್ಷ ಉದಯ ಕುಮಾರ್, ನಿಯೋಜಿತ ಅಧ್ಯಕ್ಷ ಪ್ರಮೋದ್ ಕುಮಾರ್, ಕಾರ್ಯದರ್ಶಿ ಮಹಾವೀರ ಜೈನ್, ನಿಯೋಜಿತ ಕಾರ್ಯದರ್ಶಿ ಫಣಿರಾಜ ಜೈನ್, ಚಾರ್ತುಮಾಸ್ಯ ವ್ಯವಸ್ಥಾಪನ ಸಮಿತಿ ಕಾರ್ಯಾಧ್ಯಕ್ಷ ನವೀನ್‌ಚಂದ್ ಬಲ್ಲಾಳ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು ವಿಭಾಗದ ಭಾರತೀಯ ಜೈನ್‌ಮಿಲನ್ ನಿರ್ದೇಶಕ ಜಯರಾಜ್ ಕಂಬಳಿ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಇದಕ್ಕೂ ಮೊದಲು ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ದಿ ಎರ್ಮೋಡಿ ಗುಣಪಾಲ ಜೈನ್ ಸ್ಮರಣಾರ್ಥ 24 ಕಲಶ ಅಭಿಷೇಕ, ಮಹಾಪೂಜೆ ಮತ್ತು ಶ್ರೀ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ ಜರಗಿತು. ಜತೆ ಕಾರ್ಯದರ್ಶಿ ಶರ್ಮಿತ್ ಕುಮಾರ್ ಜೈನ್ ವರದಿ ವಾಚಿಸಿದರು. ಡಾ ಮಹಾವೀರ ಜೈನ್ ಮೂಡಬಿದಿರೆ ಸ್ವಾಗತಿಸಿ, ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರ್ವಹಿಸಿದರು.